ADVERTISEMENT

ಕೋವಿಡ್ ಉಲ್ಬಣಕ್ಕೆ ಓಮೈಕ್ರಾನ್ ಕಾರಣ, ನಿರ್ಲಕ್ಷ್ಯ ಸಲ್ಲ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 2 ಫೆಬ್ರುವರಿ 2022, 3:22 IST
Last Updated 2 ಫೆಬ್ರುವರಿ 2022, 3:22 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ಜಿನೀವಾ: ಕಳೆದ 10 ವಾರಗಳಲ್ಲಿ ವಿಶ್ವದಾದ್ಯಂತ ಕೋವಿಡ್–19 ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಲು ಓಮೈಕ್ರಾನ್ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್‌ ಗೆಬ್ರೆಯೆಸಸ್‌ ಹೇಳಿದ್ದಾರೆ.

ಓಮೈಕ್ರಾನ್ ಮೊದಲು ಪತ್ತೆಯಾದ ಬಳಿಕ ಈವರೆಗೆ ವಿಶ್ವದಾದ್ಯಂತ 9 ಕೋಟಿ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಸಾಂಕ್ರಾಮಿಕದ ಮೊದಲ ವರ್ಷ 2020ರಲ್ಲಿಯೂ ಇಷ್ಟು ಕಡಿಮೆ ಅವಧಿಯಲ್ಲಿ ಈ ಪ್ರಮಾಣದಲ್ಲಿ ಪ್ರಕರಣಗಳು ವರದಿಯಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅನೇಕ ದೇಶಗಳು ಕೋವಿಡ್ ನಿರ್ಬಂಧಗಳನ್ನು ಸಡಿಲಿಸುತ್ತಿವೆ. ಈ ಹಿಂದಿನ ರೂಪಾಂತರಗಳಷ್ಟು ಸಮಸ್ಯೆ ಉಂಟು ಮಾಡದಿದ್ದರೂ ಓಮೈಕ್ರಾನ್‌ ಅನ್ನು ಹಗುರವಾಗಿ ಪರಿಗಣಿಸುವುದು ಒಳ್ಳೆಯದಲ್ಲ. ವಿಶ್ವದಾದ್ಯಂತ ಹೆಚ್ಚಿನ ಕಡೆಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಲಸಿಕೆಗಳ ನೀಡಿಕೆ ಕಾರಣದಿಂದಾಗಿ, ಓಮೈಕ್ರಾನ್‌ನ ಹೆಚ್ಚಿನ ಪ್ರಸರಣ ಗುಣ, ಕಡಿಮೆ ತೀವ್ರತೆ, ಹರಡುವಿಕೆ ತಡೆಯುವುದು ಕಷ್ಟಸಾಧ್ಯ ಎಂಬ ಕಾರಣಗಳಿಂದಾಗಿ ಇನ್ನು ಮುಂದೆ ಹೆಚ್ಚಿನ ನಿರ್ಬಂಧಗಳ ಅಗತ್ಯವಿಲ್ಲ ಎಂಬ ನಿಲುವಿಗೆ ಅನೇಕ ದೇಶಗಳು ಬಂದಿವೆ. ಇದು ಕಳವಳಕಾರಿ ಎಂದು ಅವರು ಹೇಳಿದ್ದಾರೆ.

ಸತ್ಯಕ್ಕಿಂತ ಮಿಗಿಲಾದದ್ದು ಏನೂ ಇಲ್ಲ. ಯಾವುದೇ ದೇಶವು ಈಗಾಗಲೇ ಕೋವಿಡ್ ವಿರುದ್ಧ ವಿಜಯ ಸಾಧಿಸಿದ್ದೇವೆ ಎಂದು ಭಾವಿಸುವುದು ಅಥವಾ ಅದಕ್ಕೆ ಶರಣಾಗುವ ನಿರ್ಧಾರ ಕೈಗೊಳ್ಳುವುದು ಅಪ್ರಬುದ್ಧ ನಡವಳಿಕೆ ಎಂದು ಗೆಬ್ರೆಯೆಸಸ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.