ADVERTISEMENT

ಗಾಜಾಪಟ್ಟಿ ನಿರ್ಣಯ: ಸಭೆಗೆ ಗೈರಾದ ಭಾರತ

ಪಿಟಿಐ
Published 14 ಜೂನ್ 2025, 15:41 IST
Last Updated 14 ಜೂನ್ 2025, 15:41 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ಗಾಜಾ ಪಟ್ಟಿಯಲ್ಲಿ ‘ತಕ್ಷಣದ, ಷರತ್ತಿಲ್ಲದ ಮತ್ತು ಶಾಶ್ವತ’ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಕರಡು ನಿರ್ಣಯ ಅಂಗೀಕರಿಸಲು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಮತದಾನ ಪ್ರಕ್ರಿಯೆಗೆ ಭಾರತ ಗೈರಾಗಿದೆ. 

ಗಾಜಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮ ಘೋಷಿಸಿ, ಹಮಾಸ್‌, ಮತ್ತಿತರರ ಸಂಘಟನೆಗಳು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವವರನ್ನು ಷರತ್ತುಗಳಿಲ್ಲದೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸ್ಪೇನ್‌ ಮಂಡಿಸಿದ ಈ ನಿರ್ಣಯಕ್ಕೆ  193 ಸದಸ್ಯ ರಾಷ್ಟ್ರಗಳು ಸದಸ್ಯರಾಗಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಭೂತಪೂರ್ವ ಬೆಂಬಲ ಲಭಿಸಿತು.

ಭಾರತ ಸೇರಿ 19 ರಾಷ್ಟ್ರಗಳು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದವು. 12 ರಾಷ್ಟ್ರಗಳು ನಿರ್ಣಯಕ್ಕೆ ವಿರುದ್ಧವಾಗಿ, 149 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಗೈರಾದ ದೇಶಗಳಲ್ಲಿ ಭಾರತ, ಅಲ್ಬಾನಿಯಾ, ಈಕ್ವೆಡಾರ್‌, ಇಥಿಯೋಪಿಯಾ, ಮಾಲಾವಿ,  ಪನಾಮಾ, ದಕ್ಷಿಣ ಸುಡಾನ್‌, ಟೊಗೊ ಸೇರಿವೆ. 

ADVERTISEMENT

‘ಗಾಜಾ ಪಟ್ಟಿಯಲ್ಲಿ ಮಾನವೀಯ ಪರಿಸ್ಥಿತಿ  ಹದಗೆಡುತ್ತಿರುವ ಕಾರಣದಿಂದ ಈ ನಿರ್ಣಯ ಅಂಗೀಕರಿಸಲಾಗಿದೆ’ ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಶಾಶ್ವತ ರಾಯಭಾರ ಪ್ರತಿನಿಧಿ ಪರ್ವತನೇನಿ  ಹರೀಶ್‌ ತಿಳಿಸಿದ್ದಾರೆ. 

‘ಗಾಜಾ ಪಟ್ಟಿಯಲ್ಲಿನ ಮಾನವೀಯ ಬಿಕ್ಕಟ್ಟು ಮತ್ತು ನಾಗರಿಕರ ಜೀವಹಾನಿಯ ಕುರಿತು ಭಾರತ ಅತೀವ ಕಳವಳ ಹೊಂದಿದೆ’ ಎಂದು ಅವರು ಹೇಳಿದ್ದಾರೆ. 

‘ಇಸ್ರೇಲ್‌–ಪ್ಯಾಲೆಸ್ಟೀನಿಯನ್‌ ವಿಷಯದಲ್ಲಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದಿಂದಲೂ ಭಾರತ ದೂರ ಉಳಿದಿತ್ತು’ ಎಂದು ಹರೀಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.