ADVERTISEMENT

ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕೈಬಿಡಲಿರುವ ಭಾರತ: ಗ್ರೀರ್

ಅಮೆರಿಕದ ವ್ಯಾಪಾರ ಪ್ರತಿನಿಧಿ ಗ್ರೀರ್‌ ಹೇಳಿಕೆ

ಪಿಟಿಐ
Published 4 ಫೆಬ್ರುವರಿ 2026, 15:48 IST
Last Updated 4 ಫೆಬ್ರುವರಿ 2026, 15:48 IST
-
-   

ನ್ಯೂಯಾರ್ಕ್/ವಾಷಿಂಗ್ಟನ್: ‘ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹಲವು ಸರಕುಗಳ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಲಿದೆ. ಕೆಲ ಕೈಗಾರಿಕೆ ಸರಕುಗಳು, ಹಣ್ಣುಗಳು/ ತರಕಾರಿಗಳು ಸೇರಿ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಅದು ತೆಗೆದು ಹಾಕಲಿದೆ’ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್‌) ಜೇಮ್‌ಸನ್ ಗ್ರೀರ್‌ ಹೇಳಿದ್ದಾರೆ.

‘ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಫಂದ ಮಹತ್ವದ ಬೆಳವಣಿಗೆ’ ಎಂದು ಬಣ್ಣಿಸಿದ ಅವರು,‘ಕೆಲ ಕ್ಷೇತ್ರಗಳನ್ನು ರಕ್ಷಿಸುವುದಕ್ಕೆ ಭಾರತ ಒತ್ತು ನೀಡಿದ್ದು, ಅವುಗಳ ಮೇಲೆ ಅದು ಹೊಂದಿರುವ ನಿಯಂತ್ರಣ ಅಬಾಧಿತವಾಗಿರಲಿದೆ’ ಎಂದು ಹೇಳಿದ್ದಾರೆ.

ಸಿಎನ್‌ಬಿಸಿ ಸ್ಕ್ವಾಕ್‌ಬಾಕ್ಸ್‌ ಜೊತೆ ಮಾತನಾಡಿರುವ ಗ್ರೀರ್‌,‘ಭಾರತದೊಂದಿಗಿನ ವ್ಯಾಪಾರ ಕೊರತೆ ಅಧಿಕವಾಗಿದೆ. ಇದನ್ನು ಸರಿದೂಗಿಸುವ ಭಾಗವಾಗಿ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ18ರಷ್ಟು ತೆರಿಗೆಯನ್ನು ಅಮೆರಿಕ ವಿಧಿಸಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಇದಕ್ಕೆ ಪ್ರತಿಯಾಗಿ, ಹಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ವೈದ್ಯಕೀಯ ಉಪಕರಣಗಳ ಮೇಲಿನ ಸುಂಕ ಕಡಿಮೆ ಮಾಡುವುದಕ್ಕೆ ಭಾರತ ಒಪ್ಪಿದೆ. ಈ ಎಲ್ಲ ದೃಷ್ಟಿಯಿಂದ ಉಭಯ ದೇಶಗಳಿಗೆ ಅದ್ಭುತ ಅವಕಾಶ ಬಂದೊದಗಿದಂತಾಗಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.