ADVERTISEMENT

ಕೋವಿಡ್-19: ಡಬ್ಯ್ಲುಎಚ್‌ಒ ಬಗ್ಗೆ ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

ಏಜೆನ್ಸೀಸ್
Published 18 ಮೇ 2020, 3:25 IST
Last Updated 18 ಮೇ 2020, 3:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೆವಾ:ಕೋವಿಡ್–19 ಹರಡುವುದನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಯಬೇಕು ಎಂಬ ಒತ್ತಾಯಕ್ಕೆ ಭಾರತ ಸೇರಿದಂತೆ 62 ದೇಶಗಳು ಬೆಂಬಲ ಸೂಚಿಸಿವೆ. ಇಂದಿನಿಂದ ಆರಂಭವಾಗಲಿರುವ 73ನೇ ವಿಶ್ವ ಆರೋಗ್ಯ ಸಮಾವೇಶದ (ಡಬ್ಲ್ಯುಎಚ್‌ಎ) ಸಭೆಗೆ ಪ್ರಸ್ತಾಪಿಸಲಾದ ಕರಡು ನಿರ್ಣಯದಲ್ಲಿ ಈ ಮಾಹಿತಿ ಇದೆ.

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಕ್ರಮಗಳು ಮತ್ತು ಮಾರ್ಗಸೂಚಿಗಳ ಕುರಿತು ತನಿಖೆ ನಡೆಸುವುದಲ್ಲದೆ, ಕೊರೊನಾ ವೈರಸ್ ಬಿಕ್ಕಟ್ಟಿನ ಬಗ್ಗೆ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಕರಡಿನಲ್ಲಿ ಒತ್ತಾಯಿಸಲಾಗಿದೆ.

ಕೋವಿಡ್-19ಗೆ ವಿಶ್ವ ಆರೋಗ್ಯ ಸಂಸ್ಥೆಯ ಸಂಘಟಿತ ಅಂತರರಾಷ್ಟ್ರೀಯ ಆರೋಗ್ಯ ಪ್ರತಿಕ್ರಿಯೆಯಿಂದ ಪಡೆದ ಅನುಭವ ಮತ್ತು ಪಾಠಗಳನ್ನು ಪರಿಶೀಲಿಸಲು, ಸೂಕ್ತ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚಿಸಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಬಳಸುವುದು ಸೇರಿದಂತೆ, ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಕರಡಿನಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್–19ಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಗೆ ನಡೆಸಲು ಒತ್ತಾಯಿಸುತ್ತಿರುವಐರೋಪ್ಯ ದೇಶಗಳು ಮತ್ತು ಆಸ್ಟ್ರೇಲಿಯಾ ದೇಶಗಳು ಇತರ ರಾಷ್ಟ್ರಗಳ ಬೆಂಬಲವನ್ನೂ ಯಾಚಿಸುತ್ತಿವೆ.

ಆಸ್ಟ್ರೇಲಿಯಾದ ವಿದೇಶಾಂಗ ಸಚಿವರಾದ ಮರಿಸೆ ಪೇನ್, ಬಿಕ್ಕಟ್ಟಿನ ಕುರಿತು ತನಿಖೆ ನಡೆಸಲು ಏಕಾಏಕಿ ಡಬ್ಲ್ಯುಎಚ್‌ಒಗೆ ಅವಕಾಶ ನೀಡುವುದು 'ನಮ್ಮನ್ನೇ ಕಳ್ಳ ಬೇಟೆಗಾರ ಮತ್ತು ಗೇಮ್‌ಕೀಪರ್ ಆಗಿ ನೋಡುವಂತೆ ಮಾಡುತ್ತದೆ' ಎಂದು ಹೇಳಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.

ಇದು ಮುಂದೆ ಎದುರಾಗಬಹುದಾದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಥವಾ ಎದುರಿಸಲು ಮತ್ತು ನಮ್ಮ ನಾಗರಿಕರನ್ನು ಸುರಕ್ಷಿತವಾಗಿಡಲು ಅಂತರರಾಷ್ಟ್ರೀಯ ಸಮುದಾಯವನ್ನು ಸಜ್ಜುಗೊಳಿಸಲುಸಹಕಾರಿಯಾಗುತ್ತದೆ ಎಂದು ಪೇನ್ ಹೇಳಿದ್ದಾರೆ.

ಈ ಪ್ರಸ್ತಾವದಲ್ಲಿ ಕೊರೊನಾ ವೈರಸ್ ಏಕಾಏಕಿ ಪ್ರಾರಂಭವಾಯಿತು ಎಂದು ನಂಬಲಾದ ಚೀನಾ ಅಥವಾ ವುಹಾನ್ ನಗರದ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಐರೋಪ್ಯ ಒಕ್ಕೂಟದ ದೇಶಗಳ ಹೊರತಾಗಿಜಪಾನ್, ಬ್ರಿಟನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಕೆನಡಾಗಳು ಕರಡನ್ನು ಬೆಂಬಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.