ಮಾಲೆ (ಮಾಲ್ಡೀವ್ಸ್): ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಡೆ ಒಡ್ಡುವ ಕಾರ್ಯತಂತ್ರವನ್ನು ಜಾರಿ ಮಾಡಲು ಭಾರತವು ಸಜ್ಜಾಗಿದೆ. ಸೇತುವೆ ಮತ್ತು ಇತರ ಮೂಲಸೌಕರ್ಯ ನಿರ್ಮಾಣಕ್ಕಾಗಿಮಾಲ್ಡೀವ್ಸ್‌ಗೆ ಸುಮಾರು ₹3,750 ಕೋಟಿ ನೀಡುವುದಾಗಿ ಹೇಳಿದೆ.
ಅಬ್ದುಲ್ಲಾ ಯಮೀನ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಲ್ಡೀವ್ಸ್, ಚೀನಾದಿಂದ ಭಾರಿ ಪ್ರಮಾಣದ ಸಾಲ ಪಡೆದಿತ್ತು ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಚೀನಾದ ಸಂಸ್ಥೆಗಳಿಗೆ ನೀಡಿತ್ತು.
ಚೀನಾದ ನಡೆಯು ಭಾರತ ಮತ್ತು ಪಶ್ಚಿಮದ ದೇಶಗಳ ಚಿಂತೆಗೆ ಕಾರಣವಾಗಿತ್ತು. ಏಷ್ಯಾ ಮತ್ತು ಅದರಾಚೆಗಿನ ದೇಶಗಳಿಗೂ ಆ ದೇಶಗಳು ಮರುಪಾವತಿ ಮಾಡಲು ಸಾಧ್ಯವಾಗದ ಪ್ರಮಾಣದ ಸಾಲ ನೀಡುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಲು ಚೀನಾ ಯತ್ನಿಸುತ್ತಿದೆ ಎಂಬುದು ಭಾರತವನ್ನು ಕಳವಳಕ್ಕೆ ಈಡು ಮಾಡಿತ್ತು.
ಮಾಲ್ಡೀವ್ಸ್‌ನಲ್ಲಿ ಈಗ ಹೊಸ ಸರ್ಕಾರ ಬಂದಿದೆ. ಹಾಗಾಗಿ ಭಾರತವು ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಲು ಯತ್ನಿಸುತ್ತಿದೆ.
ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಅವರು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ, ಹೊಸ ಹೂಡಿಕೆಯೂ ಸೇರಿ ಮಾಲ್ಡೀವ್ಸ್‌ಗೆ ಭಾರತ ನೀಡಲು ಉದ್ದೇಶಿಸಿರುವ ಮೊತ್ತವು ₹15 ಸಾವಿರ ಕೋಟಿಗೂ ಹೆಚ್ಚಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಪೂರ್ವ ಲಡಾಖ್‌ನಲ್ಲಿ ಭಾರತ–ಚೀನಾ ನಡುವಣ ಸಂಘರ್ಷವು ಪರಿಹಾರ ಕಾಣದ ಕಾರಣ ಭಾರತ ಸರ್ಕಾರವು ನೆರೆಯ ದೇಶಗಳಲ್ಲಿ ಪ್ರಾಬಲ್ಯ ವೃದ್ಧಿಸಲು ಮುಂದಾಗಿದೆ ಎನ್ನಲಾಗಿದೆ. ಶ್ರೀಲಂಕಾಕ್ಕೆ ಸುಮಾರು ₹3,000 ಕೋಟಿ ನೆರವು ನೀಡಲು ಭಾರತವು ಜುಲೈ 24ರಂದು ನಿರ್ಧರಿಸಿತ್ತು. ಜತೆಗೆ, ಭಾರತಕ್ಕೆ ಆ ದೇಶವು ಮರುಪಾವತಿ ಮಾಡಬೇಕಿರುವ ಸಾಲದ ಅವಧಿಯನ್ನು ಮುಂದೂಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಯಮೀನ್ ಅವರು ಚೀನಾದತ್ತ ವಾಲಿದ ಪರಿಣಾಮವಾಗಿ ಭಾರತದ ಜತೆಗೆ ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿತ್ತು. 2018ರ ನವೆಂಬರ್‌ನಲ್ಲಿ ಸಾಲಿಹ್ ಅವರು ಅಧ್ಯಕ್ಷರಾಗುವುದರೊಂದಿಗೆ ಭಾರತದ ಜತೆಗಿನ ಸಂಬಂಧಕ್ಕೆ ಪುನಶ್ಚೇತನ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.