ಜೇವಿಯರ್ ಮಿಲೆ, ನರೇಂದ್ರ ಮೋದಿ
(ಚಿತ್ರ ಕೃಪೆ: X/@narendramodi)
ಬ್ಯೂನಸ್ ಏರೀಸ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅರ್ಜೆಂಟೀನಾ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಹಕಾರ ಹಾಗೂ ವ್ಯಾಪಾರ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಯಿತು.
ಪ್ರಧಾನಿ ಮೋದಿ ಅವರು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದ್ವಿಪಕ್ಷೀಯ ವ್ಯಾಪಾರ ವೃದ್ಧಿ, ರಕ್ಷಣೆ, ಖನಿಜ, ಔಷಧ, ಇಂಧನ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಒಪ್ಪಿಕೊಂಡಿದ್ದಾರೆ.
2018ರಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಮೋದಿ ಅರ್ಜೆಂಟೀನಾಕ್ಕೆ ತೆರಳಿದ್ದರು. ಆದರೆ 57 ವರ್ಷಗಳ ಬಳಿಕ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.
ಅರ್ಜೆಂಟೀನಾ ಜೊತೆಗಿನ ಒಗ್ಗಟ್ಟನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಪಹಲ್ಗಾಮ್ ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ಭಾರತಕ್ಕೆ ಅಚಲ ಬೆಂಬಲ ನೀಡಿದ ಅರ್ಜೆಂಟೀನಾ ಅಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
'ಭಾರತ ಹಾಗೂ ಅರ್ಜೆಂಟೀನಾ ನಡುವೆ 75 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಹಾಗೂ ಅದನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ವೃದ್ಧಿಸಿದ ಬಳಿಕ ಐದು ವರ್ಷ ಪೂರ್ಣಗೊಂಡಿವೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಮಹತ್ವದ ಹಂತವನ್ನು ತಲುಪಿದ್ದೇವೆ. ಮುಂದಿನ ಪ್ರಯಾಣವು ಇನ್ನಷ್ಟು ಭರವಸೆಯಿಂದ ಕೂಡಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
'ಔಷದ ಹಾಗೂ ಕ್ರೀಡೆಯಂತಹ ಕ್ಷೇತ್ರಗಳಲ್ಲಿ ಭಾರತ ಹಾಗೂ ಅರ್ಜೆಂಟೀನಾ ನಡುವೆ ಸಹಕಾರ ಹೆಚ್ಚಿಸಲು ಅಪಾರ ಅವಕಾಶವಿದೆ' ಎಂದು ಅವರು ಒತ್ತಿ ಹೇಳಿದ್ದಾರೆ.
'ಭಾರತ-ಅರ್ಜೆಂಟೀನಾ ನೈಸರ್ಗಿಕ ಪಾಲುದಾರರಾಗಿದ್ದು, ಈ ಸಹಕಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ' ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.