ADVERTISEMENT

‘ಜಾಧವ್‌ಗೆ ಶಿಕ್ಷೆ ಕಾನೂನುಬಾಹಿರ’

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ: ಪಾಕ್‌ ವಿರುದ್ಧ ಭಾರತದ ಆಕ್ರೋಶ

ಪಿಟಿಐ
Published 18 ಫೆಬ್ರುವರಿ 2019, 20:15 IST
Last Updated 18 ಫೆಬ್ರುವರಿ 2019, 20:15 IST
ಕುಲಭೂಷಣ್
ಕುಲಭೂಷಣ್   

ಹೇಗ್‌: ‘ಕುಲಭೂಷಣ್‌ ಜಾಧವ್‌ ಅವರ ವಿಚಾರಣೆ ನಡೆಸಿದ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ ಇಡೀ ಪ್ರಕ್ರಿಯೆಯ ಕನಿಷ್ಠ ಮಾನದಂಡಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ವಿಚಾರಣೆ, ಶಿಕ್ಷೆ ನೀಡಿರುವುದು ಕಾನೂನುಬಾಹಿರ ಎಂದು ಘೋಷಿಸಬೇಕು ಮತ್ತು ಜಾಧವ್‌ ಅವರನ್ನು ತಕ್ಷಣ ಬಿಡುಗಡೆಗೊಳಿಸಲು ಆದೇಶಿಸಬೇಕು’ ಎಂಬುದಾಗಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ(ಐಸಿಜೆ) ಮನವಿ ಮಾಡಿಕೊಂಡಿದೆ.

ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣದ ವಿಚಾರಣೆಯನ್ನು ಐಸಿಜೆ ಸೋಮವಾರದಿಂದವಿಚಾರಣೆಗೆ ಕೈಗೆತ್ತಿಕೊಂಡಿದೆ.

ನಾಲ್ಕು ದಿನ ವಿಚಾರಣೆ ನಡೆಯಲಿದ್ದು, ಮೊದಲು ಎರಡು ದಿನ ಭಾರತ ಮತ್ತು ಪಾಕಿಸ್ತಾನ ವಾದ ಮಂಡಿಸಲಿವೆ. ನಂತರ ಎರಡನೇ ಸುತ್ತಿನಲ್ಲಿ ಉಭಯ ರಾಷ್ಟ್ರಗಳಪ್ರತಿಕ್ರಿಯೆಗಳನ್ನು ನ್ಯಾಯಾಲಯ ಆಲಿಸಲಿದೆ.

ADVERTISEMENT

‘ಜಾಧವ್‌ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸಮರ್ಥ ಸಾಕ್ಷ್ಯ ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಅಲ್ಲದೆ, ಜಾಧವ್‌ ಅವರನ್ನು ಬಲವಂತದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಗಿದೆ’ ಎಂದು ಭಾರತದ ಪರ ವಾದ ಮಂಡಿಸಿದ ವಕೀಲ ಹರೀಶ್‌ ಸಾಳ್ವೆ ಹೇಳಿದರು.

‘ಜಾಧವ್‌ ಅವರ ತಪ್ಪೊಪ್ಪಿಗೆ ದಾಖಲೆಗಳನ್ನು ಪ್ರಚಾರದ ಸಾಧನವಾಗಿ ಬಳಸಿಕೊಳ್ಳುತ್ತಿದೆ’ ಎಂದೂ ಅವರು ಹೇಳಿದರು.

ಇರಾನ್‌ನಿಂದ ವಿವಾದಿತ ಬಲೂಚಿಸ್ತಾನ ಪ್ರಾಂತ್ಯಪ್ರವೇಶಿಸುವಸಂದರ್ಭದಲ್ಲಿ, 2016ರ ಮಾರ್ಚ್‌ 3ರಂದು ಭದ್ರತಾ ಪಡೆಗಳುಜಾಧವ್‌ ಅವರನ್ನು ಬಂಧಿಸಿದವು ಎಂದು ಪಾಕಿಸ್ತಾನ ಹೇಳಿದೆ.

ನೌಕಾಪಡೆಯಿಂದ ನಿವೃತ್ತರಾದ ನಂತರ, ಇರಾನ್‌ನಲ್ಲಿವ್ಯಾಪಾರ ಚಟುವಟಿಕೆ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಲಾಗಿತ್ತು ಎಂದು ಭಾರತ ಪ್ರತಿಕ್ರಿಯಿಸಿದೆ.

‘2016ರ ಏಪ್ರಿಲ್‌ನಲ್ಲಿ ಜಾಧವ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 2016ರ ಮೇನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಈ ಬಗ್ಗೆ ಭಾರತಕ್ಕೆ ಮಾಹಿತಿ ನೀಡದೆ ವಿಯೆನ್ನಾ ಒಪ್ಪಂದವನ್ನು ‍ಪಾಕಿಸ್ತಾನ ಉಲ್ಲಂಘಿಸಿದೆ’ ಎಂದು ಭಾರತ ಆರೋಪಿಸಿದೆ.

‘ಪಾಕಿಸ್ತಾನ ಸೇನಾ ನ್ಯಾಯಾಧೀಶರು ಕಾನೂನು ಪದವಿಯನ್ನೇ ಪಡೆದಿಲ್ಲ’
‘ಪಾಕಿಸ್ತಾನದ ಸೇನಾ ನ್ಯಾಯಾಲಯವು ಸ್ವತಂತ್ರವಾಗಿ ಕಾರ್ಯನಿರ್ವಹಿಸಿಲ್ಲ. ಕುಲಭೂಷಣ್‌ ಜಾಧವ್‌ ಅವರ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಅಥವಾ ಕಾನೂನು ತರಬೇತಿ ಪಡೆದಿಲ್ಲ. ಅಷ್ಟು ಮಾತ್ರವಲ್ಲ, ಕಾನೂನು ಪದವಿಯನ್ನೇ ಪಡೆದಿಲ್ಲ’ ಎಂದು ಭಾರತವು ಐಸಿಜೆಯ ಗಮನಕ್ಕೆ ತಂದಿತು.

‘ಪಾಕಿಸ್ತಾನ ಸೇನಾ ನ್ಯಾಯಾಲಯವು ‘ಅಪಾರದರ್ಶಕ ಅಥವಾ ಅಸಮರ್ಪಕ ಪ್ರಕ್ರಿಯೆ’ಯ ಮೂಲಕ ಎರಡು ವರ್ಷಗಳಲ್ಲಿ 161 ನಾಗರಿಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ’ ಎಂದು ಭಾರತ ಹೇಳಿತು.

ಪಾಕ್‌ ಪರ ನ್ಯಾಯಾಧೀಶರಿಗೆ ಹೃದಯಾಘಾತ
ಐಸಿಜೆಯಲ್ಲಿಜಾಧವ್‌ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ, ಪಾಕಿಸ್ತಾನ ಪರ ನ್ಯಾಯಾಧೀಶ ತಸ್ಸಾದುಕ್‌ ಹುಸೇನ್‌ ಗಿಲಾನಿ (69) ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತುಎಂದುಮಾಧ್ಯಮಗಳುವರದಿಮಾಡಿವೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

*
ಪಾಕಿಸ್ತಾನವು ಜಾಧವ್‌ ಪ್ರಕರಣದಲ್ಲಿ ಕಥೆ ಹೇಳುತ್ತಿದೆ. ವಸ್ತುನಿಷ್ಠ ಅಂಶಗಳ ಆಧಾರದ ಮೇಲೆ ವಾದಿಸುತ್ತಿಲ್ಲ. ಸಮರ್ಥ ಸಾಕ್ಷ್ಯಾಧಾರಗಳನ್ನೂ ಅದು ಒದಗಿಸಿಲ್ಲ.
-ಹರೀಶ್‌ ಸಾಳ್ವೆ,ಭಾರತದ ಪರ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.