ADVERTISEMENT

ಆ್ಯಪ್‌‌ ನಿಷೇಧ ಪರಿಣಾಮಕಾರಿ ಕ್ರಮ: ಅಮೆರಿಕದ ದಕ್ಷಿಣ ಏಷ್ಯಾ ತಜ್ಞ ಜೆಫ್‌ ಸ್ಮಿತ್

ಪಿಟಿಐ
Published 3 ಜುಲೈ 2020, 8:43 IST
Last Updated 3 ಜುಲೈ 2020, 8:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ‘ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಭಾರತದ ನಿರ್ಧಾರವು, ಗಡಿಯಲ್ಲಿ ಆ ದೇಶವು ನಡೆಸಿದ ಕೃತ್ಯಕ್ಕೆ ತಕ್ಕ ಬೆಲೆಯನ್ನು ತೆರುವಂತೆ ಮಾಡುವ ಕ್ರಮ. ಮಾತ್ರವಲ್ಲದೆ, ಭಾರತದೊಳಗೆ ಬಳಕೆದಾರರ ಮಾಹಿತಿ ಸಂಗ್ರಹಿಸುವುದನ್ನು ತಡೆಯುವ ಪರಿಣಾಮಕಾರಿ ಕ್ರಮವೂ ಆಗಿದೆ’ ಎಂದು ಅಮೆರಿಕದ ದಕ್ಷಿಣ ಏಷ್ಯಾ ಕುರಿತ ತಜ್ಞ ಜೆಫ್‌ ಸ್ಮಿತ್‌ ಹೇಳಿದ್ದಾರೆ.

‘ಚೀನಾದ ಗಡಿ ಪ್ರಚೋದನೆಗೆ ತಕ್ಕ ಉತ್ತರ ನೀಡುವ ಪರಿಣಾಮಕಾರಿ ಕ್ರಮದ ಬಗ್ಗೆ ಭಾರತ ಸರ್ಕಾರ ಹುಡುಕಾಟ ನಡೆಸಿತ್ತು. ಅಂತಿಮವಾಗಿ, ತಂತ್ರಜ್ಞಾನ ಕ್ಷೇತ್ರದ ಮೂಲಕ ತಿರುಗೇಟು ನೀಡಿದೆ. ದೇಶದೊಳಗೆ ಚೀನಾ ಗೂಢಚರ್ಯೆ ನಡೆಸುತ್ತಿದೆ, ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬ ಭಯ ಭಾರತೀಯರಲ್ಲಿ ಹೆಚ್ಚುತ್ತಲೇ ಇತ್ತು’ ಎಂದು ಅವರು ಹೇಳಿದ್ದಾರೆ.

‘ಇಂಥ ನಿರ್ಬಂಧವು ಆರ್ಥಿಕ ರಾಷ್ಟ್ರೀಯವಾದಕ್ಕೆ ಕಾರಣವಾಗಬಹುದು, ವ್ಯಾಪಾರ ಮತ್ತು ಹೂಡಿಕೆಯ ಮೇಲೆ ನಿರ್ಬಂಧ ವಿಧಿಸಲು ಮತ್ತು ಅಮೆರಿಕದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲೂ ಇದು ದಾರಿಯಾಗಬಹುದು ಎಂಬ ಧೋರಣೆ ಅಮೆರಿಕದಲ್ಲಿದೆ. ಆದರೆ, ರಾಷ್ಟ್ರೀಯ ಭದ್ರತೆಯ ಕಾರಣದಿಂದ ಚೀನಾದ ವಿರುದ್ಧ ಭಾರತ ನಡೆಸಿದ ನಿರ್ದೇಶಿತ ದಾಳಿ ಇದಾಗಿದ್ದರೆ, ತನ್ನ ಕೃತ್ಯಕ್ಕೆ ಬೆಲೆ ತೆರುವಂತೆ ಮಾಡುವ ಪರಿಣಾಮಕಾರಿಯಾದ ಮಾರ್ಗ ಎನಿಸುತ್ತದೆ. ಭಾರತದ ಈ ಕ್ರಮವನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರೂ ಬೆಂಬಲಿಸಿದ್ದಾರೆ’ ಎಂದು ಸ್ಮಿತ್‌ ಹೇಳಿದ್ದಾರೆ.

ADVERTISEMENT

‘ಭಾರತದ ಈ ಕ್ರಮದಿಂದ ಚೀನಾದ ಕಂಪನಿಗಳ ಆರ್ಥಿಕತೆಯ ಮೇಲೆ ಆಗುವ ಅಲ್ಪಾವಧಿಯ ಪರಿಣಾಮಗಳ ಬಗ್ಗೆ ಮಾತ್ರ ಈಗ ಚರ್ಚೆಯಾಗುತ್ತಿದೆ. ಅದು ಸಾಧಾರಣ ಪರಿಣಾಮ ಮಾತ್ರ. ಚೀನಾ ಈ ಸಂಸ್ಥೆಗಳ ಮೂಲಕ ಬಯಸುವುದು ಅಲ್ಪಾವಧಿಯ ಲಾಭವನ್ನು ಮಾತ್ರ ಅಲ್ಲ. ಬದಲಿಗೆ, ಭಾರತೀಯ ಬಳಕೆದಾರರು, ಚಂದಾದಾರರು ಹಾಗೂ ಅವರ ದತ್ತಾಂಶಗಳನ್ನು ಸಂಗ್ರಹಿಸಲು ಬಯಸುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಆರ್ಥಿಕ ಲಾಭ ಗಳಿಸಲು ಸಾಧ್ಯವಾಗುತ್ತದೆ. ಚೀನಾದ ರಾಷ್ಟ್ರೀಯ ಭದ್ರತಾ ಕಾನೂನಿಕ ಪ್ರಕಾರ, ಸರ್ಕಾರವು ಕೇಳಿದರೆ, ಕಂಪನಿಗಳು ತಮ್ಮಲ್ಲಿ ಸಂಗ್ರಹವಾಗಿರುವ ಗ್ರಾಹಕರ ಎಲ್ಲಾ ಮಾಹಿತಿಯನ್ನು ಕೊಡಬೇಕಾಗುತ್ತದೆ’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘ಆ್ಯಪ್‌ಗಳ ನಿಷೇಧದಿಂದ, ಭಾರತೀಯರ ದತ್ತಾಂಶ ಎಂಬ ಅಮೂಲ್ಯ ಸರಕನ್ನು ಚೀನಾ ಕಳೆದುಕೊಂಡಂತಾಗಿದೆ. ಅಲ್ಲದೆ ಭಾರತೀಯರ ಮೇಲೆ ಪ್ರಭಾವ ಬೀರಲು ಮತ್ತು ಮಾಹಿತಿ ಸಂಗ್ರಹಿಸಲು ಸಾಧ್ಯವಾಗದಂತಾಗಿದೆ. ಭಾರತದ ಅನೇಕ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಈಗಾಗಲೇ ಚೀನಾ ಪ್ರವೇಶ ನಿರಾಕರಿಸಿರುವುದರಿಂದ ಭಾರತದ ಕ್ರಮಕ್ಕೆ ಪ್ರತಿಕ್ರಿಯೆ ನೀಡಲಾಗದ ಸ್ಥಿತಿಯಲ್ಲಿ ಚೀನಾ ಇದೆ’ ಎಂದು ಸ್ಮಿತ್‌ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.