ಭಾರತ, ಚೀನಾ
ಬೀಜಿಂಗ್: ಚೀನಾ ಮತ್ತು ಭಾರತ ಸೇನೆಗಳು ಜಂಟಿಯಾಗಿ ತಮ್ಮ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಬೇಕು ಎಂದು ಚೀನಾ ಸೇನೆ ಗುರುವಾರ ಹೇಳಿದೆ.
ಉಭಯ ದೇಶಗಳ ನಡುವೆ ಇತ್ತೀಚೆಗೆ ಗಡಿಯಲ್ಲಿನ ಪರಿಸ್ಥಿತಿ ಕುರಿತು ರಚನಾತ್ಮಕ ಮತ್ತು ಸಕಾರಾತ್ಮಕ ಮಾತುಕತೆ ನಡೆದ ಬಳಿಕ ಚೀನಾ ಸೇನೆ ಈ ಕುರಿತು ಹೇಳಿಕೆ ನೀಡಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವೆ ಆಗಸ್ಟ್ 19ರಂದು ದೆಹಲಿಯಲ್ಲಿ ಭಾರತ– ಚೀನಾ ಗಡಿ ಸಮಸ್ಯೆಗಳ ಕುರಿತು 24ನೇ ಸುತ್ತಿನ ಮಾತುಕತೆ ನಡೆದಿತ್ತು. ಈ ವೇಳೆ 10 ಅಂಶಗಳಿಗೆ ಒಮ್ಮತ ಮೂಡಿತ್ತು ಎಂದು ಚೀನಾ ತಿಳಿಸಿದೆ.
ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ಗಡಿ ನಿರ್ವಹಣೆ ಮತ್ತು ನಿಯಂತ್ರಣ ಕಾರ್ಯವಿಧಾನಗಳನ್ನು ಬಳಸಿಕೊಳ್ಳಲು ಎರಡೂ ಕಡೆಯವರು ಸಮ್ಮತಿಸಿದ್ದಾರೆ ಎಂದು ಚೀನಾದ ರಕ್ಷಣಾ ವಕ್ತಾರ ಜಾಂಗ್ ಕ್ಸಿಯೋಗಾಂಗ್ ತಿಳಿಸಿದರು. ಮಾತುಕತೆಯ ಫಲಿತಾಂಶದ ಕುರಿತು ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದರು.
ಗಡಿ ಸಮಸ್ಯೆಗಳ ಕುರಿತು ಉಭಯ ದೇಶಗಳ ಕಡೆಯವರು ಸಕಾರಾತ್ಮಕ, ರಚನಾತ್ಮಕವಾಗಿ ಹಾಗೂ ಪ್ರಾಮಾಣಿಕ ಮತ್ತು ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಹಲವು ವಿಷಯಗಳಲ್ಲಿ ಒಮ್ಮತ ಮೂಡಿತು ಎಂದೂ ಅವರು ವಿವರಿಸಿದರು.
ಚೀನಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳು ಆರಂಭವಾಗಿ 75 ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ ಎರಡೂ ಕಡೆಯ ದ್ವಿಪಕ್ಷೀಯ ಸಂಬಂಧಗಳು ಸಕಾರಾತ್ಮಕವಾಗಿ ಸುಧಾರಿಸಬೇಕು. ಪರಸ್ಪರ ಗೌರವ, ವಿಶ್ವಾಸ, ಶಾಂತಿ, ಸಹಬಾಳ್ವೆಯಿಂದ ಮುನ್ನಡೆಯಬೇಕು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.