ADVERTISEMENT

ಹೂಡಿಕೆ ಹೆಚ್ಚಿಸಲು ಭಾರತ - ಸೌದಿ ಅರೇಬಿಯಾ ಒಪ್ಪಿಗೆ

ಕಾರ್ಯ ಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ, ಯುವ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಒಪ್ಪಿಗೆ

ಪಿಟಿಐ
Published 30 ನವೆಂಬರ್ 2018, 20:00 IST
Last Updated 30 ನವೆಂಬರ್ 2018, 20:00 IST
ಬ್ಯೂನಸ್‌ ಐರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಾತುಕತೆ ನಡೆಸಿದರು–ರಾಯಿಟರ್ಸ್‌ ಚಿತ್ರ
ಬ್ಯೂನಸ್‌ ಐರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಾತುಕತೆ ನಡೆಸಿದರು–ರಾಯಿಟರ್ಸ್‌ ಚಿತ್ರ   

ಬ್ಯೂನಸ್‌ ಐರಿಸ್‌ (ಅರ್ಜೆಂಟಿನಾ): ಭಾರತದಲ್ಲಿ ಇಂಧನ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸುವ ಕಾರ್ಯಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಯುವ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಒಪ್ಪಿಗೆ ಸೂಚಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಜಿ–20 ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾದ ಉಭಯ ನಾಯಕರು, ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಸೌದಿ ಅರೇಬಿಯಾದ ಹೂಡಿಕೆಯನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎನ್ನುವ ಬಗ್ಗೆ ನಿರ್ದಿಷ್ಟವಾಗಿ ಚರ್ಚಿಸಿದರು.

ರಾಷ್ಟ್ರೀಯ ಮೂಲಸೌಕರ್ಯ ನಿಧಿಯಲ್ಲಿ ಪ್ರಾಥಮಿಕ ಹೂಡಿಕೆ ಬಗ್ಗೆ ಶೀಘ್ರದಲ್ಲೇ ಸೌದಿ ಅರೇಬಿಯಾ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಲ್ಮಾನ್‌ ತಿಳಿಸಿದರು.

ADVERTISEMENT

‘ನಾಯಕತ್ವ ಹಂತದಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲು ಇಬ್ಬರೂ ನಾಯಕರು ಒಪ್ಪಿದ್ದಾರೆ. ತಂತ್ರಜ್ಞಾನ, ತಯಾರಿಕಾ ವಲಯ, ಇಂಧನ ಹಾಗೂ ಆಹಾರ ಭದ್ರತೆ ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆ ಕೈಗೊಳ್ಳಲು ಯೋಜನೆ ರೂಪಿಸುವ ಕುರಿತು ಚರ್ಚಿಸಿದರು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ತಿಳಿಸಿದರು.

‘ಮುಖ್ಯವಾಗಿ ಭಾರತದಲ್ಲಿ ಸ್ಥಿರವಾದ ಇಂಧನ ಬೆಲೆಯನ್ನು ನಿಗದಿಪಡಿಸುವಲ್ಲಿ ಸೌದಿ ಅರೇಬಿಯಾ ಯಾವ ರೀತಿ ಕ್ರಮಕೈಗೊಳ್ಳಬಹುದು ಎನ್ನುವ ಬಗ್ಗೆ ನರೇಂದ್ರ ಮೋದಿ ಚರ್ಚಿಸಿದರು’ ಎಂದು ಗೋಖಲೆ ತಿಳಿಸಿದರು.

‘ಜಿ20' ಶೃಂಗಸಭೆ ಆರಂಭ
ವ್ಯಾಪಾರ, ಆರ್ಥಿಕ ಬಿಕ್ಕಟ್ಟು, ವಲಸೆ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಇಲ್ಲಿ ಆರಂಭವಾಗಿರುವ ‘ಜಿ20’ ಶೃಂಗಸಭೆಯಲ್ಲಿ ಚರ್ಚೆಯಾಗಲಿವೆ.

ಉಕ್ರೇನ್‌ ಬಿಕ್ಕಟ್ಟು ಹಾಗೂ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ವಿಷಯಗಳು ಸಹ ಚರ್ಚೆಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.