775 ಮಂದಿ ಭಾರತೀಯರನ್ನು ಸಿರಿಯಾದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ
ಚಿತ್ರ ಕೃಪೆ: @IndiaInLebanon
ನವದೆಹಲಿ: ಹೋರಾಟಗಾರರ ಬಂಡಾಯದಿಂದ ಸಿರಿಯಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾದ ಎರಡು ದಿನಗಳ ಬಳಿಕ ಡಮಾಸ್ಕಸ್ ಮತ್ತು ಬೈರುತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳು 75 ಮಂದಿ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
‘ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರವು ಇಂದು ಸಿರಿಯಾದಿಂದ 75 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದೆ’ ಎಂದು ಸಚಿವಾಲಯ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ.
‘ಸ್ಥಳಾಂತರಗೊಂಡವರಲ್ಲಿ ಜಮ್ಮು ಮತ್ತು ಕಾಶ್ಮೀರದ 44 ಜೈರೀನ್‌ಗಳೂ ಸೇರಿದ್ದಾರೆ. ಅವರು ಸೈದಾ ಜೈನಾಬ್‌ನಲ್ಲಿ ಸಿಕ್ಕಿಬಿದ್ದಿದ್ದರು. ಎಲ್ಲರೂ ಸುರಕ್ಷಿತವಾಗಿ ಲೆಬನಾನ್ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಮರಳುತ್ತಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರವು ಹೆಚ್ಚಿನ ಅದ್ಯತೆ ನೀಡುತ್ತಿದೆ. ಸಿರಿಯಾದಲ್ಲಿ ಇನ್ನುಳಿದ ಭಾರತೀಯ ಪ್ರಜೆಗಳು ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಭಾರತ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕಳೆದ ವಾರ ಹೋರಾಟಗಾರರು ಬಂಡಾಯವೆದ್ದ ಪರಿಣಾಮ ಸಿರಿಯಾದಲ್ಲಿ ಸರ್ಕಾರ ಪತನಗೊಂಡಿದ್ದು ಅಧ್ಯಕ್ಷ ಬಶಾರ್ ಅಸಾದ್ ದೇಶ ತೊರೆದಿದ್ದಾರೆ. ಸದ್ಯ ದೇಶ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.