ADVERTISEMENT

ವಿಶ್ವಸಂಸ್ಥೆಯ ಕಾರ್ಯಸಾಧಕತೆ ಪ್ರಶ್ನಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:15 IST
Last Updated 24 ಫೆಬ್ರುವರಿ 2023, 22:15 IST
   

ನವದೆಹಲಿ: ವರ್ಷ ಪೂರೈಸಿದ ಉಕ್ರೇನ್‌ ಯುದ್ಧ ಕೊನೆಗೊಳಿಸುವ ಸಲುವಾಗಿ ಸೇನೆ ಹಿಂಪಡೆಯಲು ರಷ್ಯಾದ ಮೇಲೆ ಒತ್ತಡ ಹೇರುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಹೊರಗುಳಿಯಿತು. ಉಭಯ ರಾಷ್ಟ್ರಗಳ ಸಂಘರ್ಷದಲ್ಲಿ ಭಾರತ ಮತ್ತೊಮ್ಮೆ ತಟಸ್ಥ ನಿಲುವು ತೆಗೆದುಕೊಂಡಿತು. ಜಾಗತಿಕ ಶಾಂತಿ ಕಾಪಾಡುವಲ್ಲಿ ವಿಶ್ವಸಂಸ್ಥೆಯ ಕಾರ್ಯಸಾಧಕತೆಯನ್ನೂ ಭಾರತ ಪ್ರಶ್ನಿಸಿತು.

ಆದಾಗ್ಯೂ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ‘ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ’ ಆದಷ್ಟು ಶೀಘ್ರ ಸ್ಥಾಪಿಸಬೇಕೆಂದು ಉಕ್ರೇನ್ ಮತ್ತು ಅದರ ಮಿತ್ರ ರಾಷ್ಟ್ರಗಳು ನಿರ್ಣಯ ಮಂಡಿಸಿದವು. 193 ಸದಸ್ಯ ಬಲದ ವಿಶ್ವಸಂಸ್ಥೆಯಲ್ಲಿ 141 ರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಣಯ ಅಂಗೀಕಾರವಾಯಿತು. ನಿರ್ಣಯದ ವಿರುದ್ಧ ಏಳು ರಾಷ್ಟ್ರಗಳು ಮಾತ್ರ ಮತ ಚಲಾಯಿಸಿದವು.

ಮತದಾನದಿಂದ ಹೊರಗುಳಿದ ಭಾರತದ ನಿಲುವನ್ನೇ ಪಾಕಿಸ್ತಾನ, ಚೀನಾ ಮತ್ತು ಇತರ 29 ರಾಷ್ಟ್ರಗಳು ಅನುಸರಿ
ಸಿದವು. ಉಕ್ರೇನ್‌ ಅಷ್ಟೇ ಅಲ್ಲ, ಫ್ರಾನ್ಸ್‌, ಜರ್ಮನಿ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟವು ನಿರ್ಣಯ ಬೆಂಬಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದವು.

ADVERTISEMENT

ಭಾರತದ ನಿರ್ಧಾರಕ್ಕೆ ವಿವರಣೆ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೊಜ್ ಅವರು, ‘ವಿಶ್ವಸಂಸ್ಥೆಯ ವ್ಯವಸ್ಥೆ ಮತ್ತು ಅದರ ಪ್ರಮುಖ ಅಂಗವೆನಿಸಿರುವ ಭದ್ರತಾ ಮಂಡಳಿಯು 1945ರ ವಿಶ್ವ ನಿರ್ಮಾಣ ಆಧಾರದ ಮೇಲೆ ರಚಿತವಾಗಿದೆ. ಸಮಕಾಲೀನ ಸವಾಲುಗಳನ್ನು ಎದುರಿಸಲು, ಜಾಗತಿಕ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಇದು ನಿಷ್ಪರಿಣಾಮಕಾರಿಯಾಗಿಲ್ಲವೇ? ರಷ್ಯಾ– ಉಕ್ರೇನ್‌ ಸಂಘರ್ಷ ಕೊನೆಗಾಣಿಸಲು ಉಭಯತ್ರರು ಒಪ್ಪುವ ಪರಿಹಾರ ಮಾರ್ಗದ ಹತ್ತಿರ ನಾವು ತಲುಪಿದ್ದೀವಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.