
ಫ್ರಾನ್ಸ್ ಅಧ್ಯಕ್ಷರ ಜೊತೆ ಜೈಶಂಕರ್
ಪ್ಯಾರಿಸ್: ಆರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗುರುವಾರ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿ, ಸಮಕಾಲೀನ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಭಾರತ–ಫ್ರಾನ್ಸ್ ಪಾಲುದಾರಿಕೆಯ ಬಗ್ಗೆ ಮ್ಯಾಕ್ರನ್ ಹೊಂದಿರುವ ಸಕಾರಾತ್ಮಕ ಧೋರಣೆಯ ಬಗ್ಗೆ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
‘ಫ್ರಾನ್ಸ್‌ನಲ್ಲಿ ರಾಯಭಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಲಭಿಸಿದ್ದು ದೊಡ್ಡ ಗೌರವ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸುತ್ತೇನೆ. ವ್ಯಾಪಾರ, ಹಣಕಾಸು, ತಂತ್ರಜ್ಞಾನ, ಇಂಧನ, ಸಂಪನ್ಮೂಲ, ಸಂಪರ್ಕ ಸೇರಿದಂತೆ ಸಮಕಾಲೀನ ಜಾಗತಿಕ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದೇವೆ. ಸ್ವಾಯತ್ತತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ–ಫ್ರಾನ್ಸ್ ಪಾಲುದಾರಿಕೆ ಮಹತ್ವದ್ದು’ ಎಂದು ಜೈಶಂಕರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫಾನ್ಸ್‌ನ ವಿದೇಶಾಂಗ ಸಚಿವ ಜೀನ್ ನೋಯೆಲ್ ಬ್ಯಾರಟ್ ಅವರೊಂದಿಗೆ ಬುಧವಾರ ಮಾತುಕತೆ ನಡೆಸಿದ್ದ ಜೈಶಂಕರ್, ‘ಜಾಗತಿಕ ಆರ್ಥಿಕತೆ, ಅಂತರರಾಷ್ಟ್ರೀಯ ರಾಜಕೀಯದಲ್ಲಿ ಸ್ಥಿರತೆ ತರುವ ನಿಟ್ಟಿನಲ್ಲಿ ಭಾರತವು ಯೂರೋಪ್‌ನೊಂದಿಗಿನ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಬಯಸುತ್ತದೆ’ ಎಂದಿದ್ದರು.
ಮ್ಯಾಕ್ರನ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ದೆಹಲಿಯಲ್ಲಿ ನಡೆಯಲಿರುವ ಕೃತಕ ಬುದ್ಧಿಮತ್ತೆ (ಎ.ಐ) ಶೃಂಗಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಲಕ್ಸಂಬರ್ಗ್ ಪ್ರಧಾನಿ ಲುಕ್ ಫ್ರೀಡೆನ್ ಅವರೊಂದಿಗೂ ಜೈಶಂಕರ್ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.