ಜಕರ್ತಾ: ಭಾರತ ಮತ್ತು ಇಂಡೋನೇಷ್ಯಾ ಜೊತೆಯಾಗಿ ಸೇರಿಕೊಂಡು ಜಗತ್ತಿಗೆ ಶಾಂತಿ ಸಂದೇಶ ಸಾರಬೇಕು ಎಂದು ಇಂಡೋನೇಷ್ಯಾದ ಪ್ರಬಲ ಮುಸ್ಲಿಂ ಸಂಘಟನೆಯೊಂದರ ಮುಖ್ಯಸ್ಥ ಹೇಳಿದ್ದಾರೆ.
ಶುಕ್ರವಾರ 'ಆಪರೇಷನ್ ಸಿಂಧೂರ' ಕುರಿತು ಮಾಹಿತಿ ನೀಡಲು ತೆರಳಿರುವ ಜೆಡಿ(ಯು) ರಾಜ್ಯ ಸಭಾ ಸದಸ್ಯ ಸಂಜಯ್ ಕುಮಾರ್ ಝಾ ನೇತೃತ್ವದ 'ಸರ್ವಪಕ್ಷ ಸಂಸದೀಯ ನಿಯೋಗ'ವು ವಿಶ್ವದ ಅತಿದೊಡ್ಡ ಮುಸ್ಲಿಂ ಸಂಘಟನೆ ಎಂದು ಗುರುತಿಸಿಕೊಂಡಿರುವ 'ನಚ್ದಲತುಲ್ ಉಲಮಾ ಕಾರ್ಯಕಾರಿ ಮಂಡಳಿ'ಯ ಅಧ್ಯಕ್ಷ ಖುಲಿಲ್ ಅಬ್ಸಹರ್ ಅಬ್ದುಲ್ಲಾ ಹಾಗೂ ಇಂಡೋನೇಷ್ಯಾದ ಪ್ರಮುಖ ಮುಸ್ಲಿಂ ನಾಯಕರನ್ನು ಭೇಟಿ ಮಾಡಿದೆ.
ನಾವು ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ವಿಶ್ವದಲ್ಲಿ ಶಾಂತಿ ನೆಲಸಬೇಕು ಎಂದು ಅಬ್ದುಲ್ಲಾ ಹೇಳಿದ್ದಾರೆ.
ಭಾರತ ಮತ್ತು ಇಂಡೋನೇಷ್ಯಾ ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಜೊತೆಯಾಗಿ ಹೋರಾಟ ಮಾಡಬೇಕು ಮತ್ತು ಅರ್ಥಿಕ ಅಭಿವೃದ್ಧಿಗೆ ಕೂಡ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದಿದ್ದಾರೆ.
ಭಾರತದ ಅಮಾಯಕ ನಾಗರಿಕರ ಮೇಲಿನ ಉಗ್ರ ಕೃತ್ಯವನ್ನು ನಾವು ಖಂಡಿಸುತ್ತೇವೆ. ಭಾರತದ ನೋವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.
'ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಶಾಂತಿ ಪ್ರಿಯ ದೇಶಗಳು ವಿವಿಧತೆಯಲ್ಲಿ ಏಕತೆಯನ್ನು ಹೊಂದಿವೆ. ಭಾರತೀಯ ನಿಯೋಗವು ಇಲ್ಲಿನ ಮುಸ್ಲಿಂ ಸಮುದಾಯದ ನಾಯಕರಿಗೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸುವ ಮೂಲಕ ಜಗತ್ತಿಗೆ ಸ್ಪಷ್ಟ ಸಂದೇಶ ನೀಡುವಂತೆ ಒತ್ತಾಯಿಸಿದರು' ಎಂದು ಜಕರ್ತಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
'ಆಪರೇಷನ್ ಸಿಂಧೂರ' ನಂತರ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ವಿಶ್ವದ ಪ್ರಮುಖ ದೇಶಗಳಿಗೆ ತಿಳಿಸುವ ಸಲುವಾಗಿ 'ಸರ್ವಪಕ್ಷ ಸಂಸದೀಯ ನಿಯೋಗ'ವನ್ನು ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.