ADVERTISEMENT

Pakistan Floods 2022 | ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ನೆರವು: ಭಾರತ ಮೌನ

ಅನಿರ್ಬನ್ ಭೌಮಿಕ್
Published 2 ಸೆಪ್ಟೆಂಬರ್ 2022, 1:21 IST
Last Updated 2 ಸೆಪ್ಟೆಂಬರ್ 2022, 1:21 IST
   

ನವದೆಹಲಿ: ಹಿಂದೆಂದೂ ಕಾಣದ ರೀತಿಯ ಭೀಕರ ಪ್ರವಾಹದಿಂದಾಗಿ ಪಾಕಿಸ್ತಾನ ತತ್ತರಿಸಿದೆ. ಆದರೆ ಪಾಕ್‌ಗೆ ಮಾನವೀಯ ನೆಲೆಯಲ್ಲಿ ನೆರವು ನೀಡಲಿದೆಯೇ ಎಂಬುದುಕ್ಕೆ ಸಂಬಂಧಿಸಿದಂತೆ ಭಾರತ ಮೌನ ತಾಳಿದೆ.

ಈಗಾಗಲೇ ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಉಂಟಾದ ಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸದ್ಯಕ್ಕೆ ನೆರವಿನ ವಿಚಾರದಲ್ಲಿ ಇಷ್ಟೇ ಹೇಳಬಲ್ಲೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪಾಕಿಸ್ತಾನದಲ್ಲಿ ಇದುವರೆಗೆ ಕನಿಷ್ಠ 1,186 ಮಂದಿ ಮೃತಪಟ್ಟಿದ್ದು, 4,896 ಮಂದಿ ಗಾಯಗೊಂಡಿದ್ದಾರೆ. ಹಲವೆಡೆ ರಸ್ತೆ ಸಂಪರ್ಕ ಕಡಿದುಕೊಂಡಿದ್ದು, ಅಂದಾಜು 5,063 ಕಿ.ಮೀ. ರಸ್ತೆ ಹಾನಿಯಾಗಿದೆ. 1,72,549 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕುಸಿದಿದೆ.

ಪಾಕಿಸ್ತಾನದಲ್ಲಿ ಸುರಿದ ಭಾರಿ ಮಳೆ ಹಾಗೂ ದಿಢೀರ್ ಪ್ರವಾಹದಿಂದಾಗಿ ಮೂರು ಕೋಟಿಗೂ ಅಧಿಕ ಮಂದಿ ಸಂತ್ರಸ್ತರಾಗಿದ್ದು, 64 ಲಕ್ಷ ಜನರಿಗೆ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಹೈ ಕಮಿಷನ್ ಕಚೇರಿಯು ಅಂದಾಜಿಸಿದೆ.

ನೈಸರ್ಗಿಕ ವಿಕೋಪದಿಂದಾಗಿ ಪಾಕಿಸ್ತಾನವು ಆಹಾರ ಧಾನ್ಯ, ತರಕಾರಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ನೆರೆಯ ಭಾರತದಿಂದ ಆಹಾರ-ಸಾಮಾಗ್ರಿಗಳ ಆಮದು ಪುನರಾರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಒಂದಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಏಜೆನ್ಸಿಗಳು ಭಾರತದಿಂದ ಆಹಾರ ಪದಾರ್ಥಗಳನ್ನು ಗಡಿ ಮೂಲಕ ತರಲು ಅವಕಾಶ ನೀಡುವಂತೆ ಸರ್ಕಾರವನ್ನು ಸಂಪರ್ಕಿಸಿವೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ.

2019ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಪ್ರತಿಭಟಿಸಿ ಪಾಕಿಸ್ತಾನ ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ಕಡಿತುಕೊಂಡಿತ್ತು. ಆದರೆ 2019 ಸೆಪ್ಟೆಂಬರ್‌ನಲ್ಲಿ ಔಷಧೀಯ ಉತ್ಪನ್ನಗಳ ವ್ಯಾಪಾರವನ್ನು ಅನುಮತಿಸುವ ಮೂಲಕ ನಿರ್ಬಂಧವನ್ನು ಸಡಿಲಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.