ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್‌ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಪ್ರಶಸ್ತಿಯನ್ನು ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರು ಭಾನುವಾರ ಬಯಾನ್ ಅರಮನೆಯಲ್ಲಿ ಪ್ರದಾನ ಮಾಡಿದರು
(ಪಿಟಿಐ ಚಿತ್ರ)
ಕುವೈತ್: ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್‌ನ ಅಮೀರ್ ಶೇಖ್ ಜತೆಗೆ ಭಾನುವಾರ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ವಿಸ್ತೃತ ಮಾತುಕತೆ ನಡೆಸಿದ್ದು, ಈ ಮಾತುಕತೆಯ ನಂತರ ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಗಟ್ಟಿಯಾಗಿದೆ.
ಇಲ್ಲಿನ ಭವ್ಯವಾದ ಬಯಾನ್ ಅರಮನೆಯಲ್ಲಿ ನಡೆದ ಸಭೆಯಲ್ಲಿ, ಮೋದಿ ಮತ್ತು ಶೇಖ್ ಮಿಶಾಲ್ ಅಲ್–ಅಹ್ಮದ್ ಅಲ್–ಜಬೀರ್ ಅಲ್–ಸಬಾ ಅವರು ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಔಷಧ, ಫಿನ್‌ಟೆಕ್, ಮೂಲಸೌಕರ್ಯ ಮತ್ತು ಭದ್ರತೆ ಕ್ಷೇತ್ರಗಳಲ್ಲಿ ಸಹಕಾರ, ಬಾಂಧವ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಿದರು.
ಕುವೈತ್‌ನಲ್ಲಿರುವ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರ ಕ್ಷೇಮಕ್ಕೆ ಒತ್ತು ನೀಡಿರುವ ಅಮೀರ್ ಅವರಿಗೆ ಮೋದಿ ಧನ್ಯವಾದ ಸಲ್ಲಿಸಿದರು. ಅಲ್ಲದೆ, ಕೊಲ್ಲಿ ರಾಷ್ಟ್ರದ ಅಭಿವೃದ್ಧಿ ಪಯಣದಲ್ಲಿ ಭಾರತೀಯ ಸಮುದಾಯ ನೀಡಿರುವ ಕೊಡುಗೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅಮೀರ್ ಅವರೊಂದಿಗಿನ ಭೇಟಿ ಮತ್ತು ಮಾತುಕತೆ ಅತ್ಯುತ್ತಮವಾಗಿತ್ತು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ನಾವು ಔಷಧ, ಐ.ಟಿ, ಫಿನ್‌ಟೆಕ್, ಮೂಲಸೌಕರ್ಯ ಮತ್ತು ಭದ್ರತೆಯಂತಹ ಪ್ರಮುಖ ವಲಯಗಳಲ್ಲಿ ಸಹಕಾರ ಹೆಚ್ಚಿಸುವ ಸಂಬಂಧ ಚರ್ಚೆ ಮಾಡಿದ್ದೇವೆ. ನಮ್ಮ ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯಕ್ಕೆ ಅನುಗುಣವಾಗಿ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ದಿದ್ದೇವೆ’ ಎಂದು ಹೇಳಿದ್ದಾರೆ.
ಅಮೀರ್ ಶೇಖ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಶನಿವಾರ ಕುವೈತ್‌ಗೆ ಎರಡು ದಿನಗಳ ಭೇಟಿ ನೀಡಿದ್ದು, ಅವರಿಗೆ ಬಯಾನ್ ಅರಮನೆಯಲ್ಲಿ ಕುವೈತ್ ಪ್ರಧಾನಿ ಅಹ್ಮದ್ ಅಲ್-ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾ ಅವರು ಭವ್ಯ ಸ್ವಾಗತ ನೀಡಿದರು. ಭಾರತದ ಪ್ರಧಾನಿಯೊಬ್ಬರು ಕೊಲ್ಲಿ ರಾಷ್ಟ್ರಕ್ಕೆ 43 ವರ್ಷಗಳ ನಂತರ ಭೇಟಿ ನೀಡಿರುವುದು ಇದೇ ಮೊದಲು.
ಇದೇ ವೇಳೆ ಮೋದಿ ಅವರು ಅಮೀರ್ ಶೇಖ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಕುವೈತ್ ತನ್ನ ‘ವಿಷನ್ 2035’ ಸಾಕಾರಗೊಳಿಸಲು ಕೈಗೊಂಡಿರುವ ಹೊಸ ಉಪಕ್ರಮಗಳನ್ನು ಮೋದಿ ಶ್ಲಾಘಿಸಿದರು. ಅಲ್ಲದೆ, ಈ ತಿಂಗಳ ಆರಂಭದಲ್ಲಿ ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಶೃಂಗಸಭೆಯನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕೆ ಅಮೀರ್ ಅವರನ್ನು ಮೋದಿ ಅಭಿನಂದಿಸಿದರು. ‘ವಿಷನ್ 2035’ ಸಾಕಾರಾಕ್ಕೆ ಭಾರತವು ಹೆಚ್ಚಿನ ಪಾತ್ರ ವಹಿಸುವುದನ್ನು ಕುವೈತ್‌ನ ಅಮೀರ್ ಎದುರು ನೋಡುತ್ತಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬರುವ ದಿನಗಳಲ್ಲಿ ಭಾರತ– ಕುವೈತ್ ಸ್ನೇಹವು ಇನ್ನಷ್ಟು ವೃದ್ಧಿಸುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆನರೇಂದ್ರ ಮೋದಿ ಭಾರತದ ಪ್ರಧಾನಿ
ಮೋದಿ ಮತ್ತು ಅಮೀರ್ ಅವರ ಮಾತುಕತೆಯು ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮಾರ್ಗ ಕಂಡುಕೊಳ್ಳುವತ್ತ ಕೇಂದ್ರೀಕರಿಸಿತ್ತುರಣಧೀರ್ ಜೈಸ್ವಾಲ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ
ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ
ಉಭಯ ದೇಶಗಳ ನಡುವೆ ಉತ್ತಮ ಸಂಬಂಧ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್-ಕಬೀರ್’ ಭಾನುವಾರ ಪ್ರದಾನ ಮಾಡಿದೆ. ಇಲ್ಲಿನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿ ಕುವೈತ್‌ನ ಶೇಖ್ ಮಿಶಾಲ್ ಅಲ್–ಅಹ್ಮದ್ ಅಲ್–ಜಬೀರ್ ಅಲ್–ಸಬಾ ಅವರಿಂದ ಈ ಗೌರವ ಸ್ವೀಕರಿಸಿದರು. ಮೋದಿಯವರಿಗೆ ಇದುವರೆಗೆ ಸಂದ 20ನೇ ಅಂತರರಾಷ್ಟ್ರೀಯ ಗೌರವ ಇದಾಗಿದೆ. ಈ ಗೌರವ ಪಡೆಯುವ ಮೂಲಕ ಮೋದಿ ಅವರು ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಜಾರ್ಜ್ ಬುಷ್ ಬ್ರಿಟನ್ ರಾಜಕುಮಾರ್ ಚಾರ್ಲ್ಸ್ ಅವರ ಸಾಲಿಗೆ ಸೇರಿದ್ದಾರೆ. ಇವರಿಗೆ ಕುವೈತ್ ಈ ಹಿಂದೆ ತನ್ನ ಅತ್ಯುನ್ನತ ಗೌರವವನ್ನು ನೀಡಿದೆ. ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಕುವೈತ್‌ನ ನೈಟ್‌ಹುಡ್ ಆರ್ಡರ್ ಆಗಿದೆ. ಇದನ್ನು ರಾಷ್ಟ್ರದ ಮುಖ್ಯಸ್ಥರು ವಿದೇಶಿ ಗಣ್ಯರು ಮತ್ತು ವಿದೇಶಿ ರಾಜಮನೆತನದ ಸದಸ್ಯರಿಗೆ ಸ್ನೇಹದ ಧ್ಯೋತಕವಾಗಿ ನೀಡಲಾಗುತ್ತದೆ. ‘ಕುವೈತ್ ನೀಡಿರುವ ಈ ಗೌರವವನ್ನು ಭಾರತದ ಜನರಿಗೆ ಮತ್ತು ಉಭಯ ದೇಶಗಳ ನಡುವಿನ ದೃಢವಾದ ಸ್ನೇಹಕ್ಕೆ ಅರ್ಪಿಸುತ್ತೇನೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.