ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್
ವಾಷಿಂಗ್ಟನ್: ರಷ್ಯಾದಿಂದ ಮಾತ್ರವಲ್ಲ ಭಾರತವು ಜಗತ್ತಿನ ಯಾವುದೇ ರಾಷ್ಟ್ರದಿಂದ ತೈಲವನ್ನು ಖರೀದಿಸಬಹುದು, ಎಂದು ಭಾರತದ ತೈಲ ವ್ಯಾಪಾರದ ಬಗ್ಗೆ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಹೇಳಿದ್ದಾರೆ.
ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಲು ಭಾರತ ಕೈಜೋಡಿಸಿದೆ. ಈ ಮೂಲಕ ಪ್ರತಿ ವಾರ ಸಾವಿರಾರು ಜನರನ್ನು ಕೊಲ್ಲುತ್ತಿರುವ ವ್ಯಕ್ತಿಗೆ (ಪುಟಿನ್) ಹಣವನ್ನು ನೀಡುತ್ತಿದೆ ಎಂದು ಕುಟುಕಿದ್ದಾರೆ.
ಜಗತ್ತಿನಲ್ಲಿ ತೈಲ ವ್ಯಾಪಾರ ಮಾಡುವ ಅನೇಕ ದೇಶಗಳಿವೆ. ಭಾರತ ರಷ್ಯಾದಿಂದ ಮಾತ್ರ ತೈಲ ಖರೀದಿಸಬೇಕೆಂದಿಲ್ಲ. ರಷ್ಯಾದ ತೈಲ ಖರೀದಿಸಲು ಯಾರೂ ಒಪ್ಪುವುದಿಲ್ಲ. ಆದರೆ ಅಗ್ಗವಾಗಿ ಸಿಗುತ್ತದೆ ಎನ್ನುವ ಕಾರಣಕ್ಕೆ ಭಾರತ ರಷ್ಯಾದೊಂದಿಗೆ ವ್ಯಾಪಾರ ನಡೆಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ರೈಟ್ ಹೇಳಿದ್ದಾರೆ.
ಅಮೆರಿಕವು ಭಾರತವನ್ನು ಶಿಕ್ಷಿಸಲು ಬಯಸುವುದಿಲ್ಲ, ಬದಲಿಗೆ ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಭಾರತವು ಅಮೆರಿಕದಿಂದಲೂ ತೈಲವನ್ನು ಖರೀದಿಸಬಹುದು. ಭಾರತ ನಮ್ಮೊಂದಿಗೂ ತೈಲದ ವ್ಯಾಪಾರ ನಡೆಸಲಿ ಎಂದು ಆಶಿಸುತ್ತೇವೆ. ಮಾರಾಟ ಮಾಡಲು ಅಮೆರಿಕದ ಬಳಿ ತೈಲವಿದೆ. ಭಾರತದೊಂದಿಗೆ ನಮ್ಮ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ ಎಂದು ರೈಟ್ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.