ADVERTISEMENT

ಭಾರತ ಮತ್ತು ಪಾಕಿಸ್ತಾನ ನಮ್ಮ ಪಾಲುದಾರ ರಾಷ್ಟ್ರಗಳು: ಅಮೆರಿಕ

ಪಿಟಿಐ
Published 27 ಸೆಪ್ಟೆಂಬರ್ 2022, 5:10 IST
Last Updated 27 ಸೆಪ್ಟೆಂಬರ್ 2022, 5:10 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌
ಅಮೆರಿಕ ಅಧ್ಯಕ್ಷ ಜೋ ಬೈಡನ್‌    

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ಎರಡೂ ಅಮೆರಿಕದ ಪಾಲುದಾರ ರಾಷ್ಟ್ರಗಳಾಗಿದ್ದು, ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತವೆ ಎಂದು ಬೈಡನ್ ಸರ್ಕಾರ ಸೋಮವಾರ ಹೇಳಿದೆ.

ವಾಷಿಂಗ್ಟನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಜಯಶಂಕರ್‌, ಅಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ಸೋಮವಾರ ನಡೆದ ಸಂವಾದದಲ್ಲಿ ಮಾತನಾಡಿದ್ದರು. ಪಾಕಿಸ್ತಾನಕ್ಕೆ ಅಮೆರಿಕದ ಎಫ್ -16 ವಿಮಾನಗಳ ಭದ್ರತಾ ನೆರವಿನ ಹಿಂದಿನ ತಾರ್ಕಿಕತೆಯನ್ನು ಜೈಶಂಕರ್‌ ಪ್ರಶ್ನಿಸಿದ್ದರು. ಇದರ ಮರುದಿನವೇ ಅಮೆರಿಕ ಪ್ರತಿಕ್ರಿಯೆ ನೀಡಿದ್ದು, ಭಾರತ ಮತ್ತು ಅಮೆರಿಕ ಎರಡೂ ಪಾಲುದಾರ ರಾಷ್ಟ್ರಗಳಾಗಿವೆ ಎಂದು ಹೇಳಿದೆ.

ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್‌–16 ಅನ್ನು ನೀಡಲಾಗಿದೆ ಎಂದು ಅಮೆರಿಕ ಮಾಡಿದ ವಾದವನ್ನು ಉಲ್ಲೇಖಿಸಿದ ಜೈಶಂಕರ್, ‘ಎಫ್‌–16 ಫೈಟರ್ ಜೆಟ್‌ಗಳನ್ನು ಯಾರು? ಎಲ್ಲಿ ಮತ್ತು ಯಾರ ವಿರುದ್ಧ ಬಳಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದ್ದರು.

ADVERTISEMENT

‘ನಾವು ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧದ ಬಗ್ಗೆ ನೋಡುವುದಿಲ್ಲ. ಮತ್ತೊಂದೆಡೆ, ನಾವು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಪರಸ್ಪರ ಸಂಬಂಧವಾಗಿ ನೋಡುವುದಿಲ್ಲ. ಈ ಇಬ್ಬರೂ ನಮ್ಮ ಪಾಲುದಾರರು ಮತ್ತು ಎರಡೂ ರಾಷ್ಟ್ರಗಳು ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಾವು ಇಬ್ಬರನ್ನೂ ಪಾಲುದಾರರನ್ನಾಗಿ ನೋಡುತ್ತೇವೆ. ಏಕೆಂದರೆ ನಾವು ಅನೇಕ ಸಂದರ್ಭಗಳಲ್ಲಿ ಮೌಲ್ಯಗಳನ್ನು ಹಂಚಿಕೊಂಡಿದ್ದೇವೆ. ನಾವು ಅನೇಕ ಸಂದರ್ಭಗಳಲ್ಲಿ ಹಿತಾಸಕ್ತಿಗಳನ್ನು ಹಂಚಿಕೊಂಡಿದ್ದೇವೆ. ಭಾರತದೊಂದಿಗೆ ನಾವು ಹೊಂದಿರುವ ಸಂಬಂಧವು ಅದರದ್ದೇ ಆದ ವಿಶೇಷತೆಯನ್ನು ಹೊಂದಿದೆ. ಪಾಕಿಸ್ತಾನದೊಂದಿಗೆ ನಾವು ಹೊಂದಿರುವ ಸಂಬಂಧವು ಕೂಡ ಅದರದ್ದೇ ಆದ ವಿಶೇಷತೆ ಹೊಂದಿದೆ’ ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಬೈಡನ್‌ ಸರ್ಕಾರವು ಪಾಕಿಸ್ತಾನಕ್ಕೆ 450 ದಶಲಕ್ಷ ಡಾಲರ್‌ಗಳ ಎಫ್‌-16 ಫೈಟರ್ ಜೆಟ್‌ಗಳನ್ನು ಒದಗಿಸಿದೆ.

ಅಫ್ಗಾನಿಸ್ತಾನದ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್‌ಗೆ ನೆಲೆ ಒದಗಿಸಿದ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಮಿಲಿಟರಿ ನೆರವು ಒದಗಿಸುವುದನ್ನು ಹಿಂದಿನ ಟ್ರಂಪ್ ಸರ್ಕಾರ ನಿಷೇಧಿಸಿತ್ತು. ಅದನ್ನು ರದ್ದುಗೊಳಿಸಿರುವ ಬೈಡನ್‌ ಸರ್ಕಾರ ಪಾಕಿಸ್ತಾನಕ್ಕೆ ರಕ್ಷಣಾ ನೆರವು ನೀಡಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.