ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧ ಹೇರಿಕೆ ಸಮಿತಿಗಳನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ. ಸಮಿತಿಗಳು ಪಾರದರ್ಶಕವಾಗಿಲ್ಲ ಎಂದಿರುವ ಭಾರತ, ಅವುಗಳ ಹೊಣೆಗಾರಿಕೆಯ ಕೊರತೆಯನ್ನು ಟೀಕಿಸಿದೆ.
ಉಗ್ರರ ಮೇಲೆ ನಿರ್ಬಂಧ ಹೇರುವಂತೆ ಮಾಡುವ ಮನವಿಗಳನ್ನು ತಿರಸ್ಕರಿಸುವಾಗ ಅದಕ್ಕೆ ಸೂಕ್ತ ಕಾರಣಗಳನ್ನೂ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮೇಲೆ ನಿರ್ಬಂಧ ಹೇರುವಂತೆ ಭಾರತ ಮಾಡುತ್ತಿರುವ ಮನವಿಗೆ ಚೀನಾ ಪದೇ ಪದೇ ಅಡ್ಡಗಾಲು ಹಾಕುತ್ತಿರುವುದಕ್ಕೆ ಅವರು ತಿರುಗೇಟು ನೀಡಿದರು. ಆದರೆ ಯಾವ ದೇಶದ ಹೆಸರನ್ನೂ ಅವರು ಪ್ರಸ್ತಾಪಿಸಲಿಲ್ಲ.
‘ಬಹುಪಕ್ಷೀಯತೆ ಬಲಪಡಿಸುವಿಕೆ ಮತ್ತು ವಿಶ್ವಸಂಸ್ಥೆಯ ಪಾತ್ರ’ ಕುರಿತು ನಡೆದ ಸಂವಾದಲ್ಲಿ ಅವರು ಮಾತನಾಡಿದರು. ‘ಸಾರ್ವಜನಿಕ ಸಂಸ್ಥೆಗಳಿಂದ ಪಾದರ್ಶನಕತೆಯನ್ನು ಜನರು ಬಯಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ವಿಶ್ವಸಂಸ್ಥೆಯ ನಿರ್ಬಂಧ ಹೇರಿಕೆಯಂತಹ ಪ್ರಸಿದ್ಧ ಸಮಿತಿಗಳ ಮೇಲೆ ನಿರೀಕ್ಷೆ ಹೆಚ್ಚೇ ಇರುತ್ತದೆ’ ಎಂದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಾರ್ಯಕ್ಷಮತೆ, ವಿಶ್ವಾಸಾರ್ಹತೆ, ನ್ಯಾಯ ಸಮ್ಮತತೆ ಮತ್ತು ಪ್ರಸ್ತುತತೆಯಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದು ಸ್ಪಷ್ಟ ಎಂದು ಅಕ್ಬರುದ್ದೀನ್ ಹೇಳಿದ್ದಾರೆ. ಭದ್ರತಾ ಮಂಡಳಿಯ ಸುಧಾರಣೆ ಸದ್ಯದ ಅಗತ್ಯ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.