ADVERTISEMENT

ಮಹತ್ವಾಕಾಂಕ್ಷೆಯ ರಕ್ಷಣಾ ಒಪ್ಪಂದಕ್ಕೆ ಭಾರತ-ಶ್ರೀಲಂಕಾ ಸಹಿ

ದ್ವೀಪ ರಾಷ್ಟ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೆರವು ಘೋಷಣೆ

ಪಿಟಿಐ
Published 5 ಏಪ್ರಿಲ್ 2025, 9:02 IST
Last Updated 5 ಏಪ್ರಿಲ್ 2025, 9:02 IST
<div class="paragraphs"><p>ನರೇಂದ್ರ ಮೋದಿ,&nbsp;ಅನುರಾ ಕುಮಾರ ದಿಸ್ಸನಾಯಕೆ</p></div>

ನರೇಂದ್ರ ಮೋದಿ, ಅನುರಾ ಕುಮಾರ ದಿಸ್ಸನಾಯಕೆ

   

(ಪಿಟಿಐ ಚಿತ್ರ)

ಕೋಲಂಬೊ: ಇದೇ ಮೊದಲ ಬಾರಿಗೆ ಭಾರತ ಹಾಗೂ ಶ್ರೀಲಂಕಾ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.

ADVERTISEMENT

ರಕ್ಷಣಾ ಕ್ಷೇತ್ರದಲ್ಲಿನ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ರೂಪಿಸಿರುವ ಚೌಕಟ್ಟಿಗೆ ಸಾಂಸ್ಥಿಕ ರೂಪ ನೀಡುವುದು ಸೇರಿದಂತೆ ಮಹತ್ವದ ಅಂಶಗಳನ್ನು ಒಪ್ಪಂದ ಒಳಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅನುತಾ ಕುಮಾರ ಡಿಸ್ಸನಾಯಕೆ ಅವರು ಸುದೀರ್ಘ ಮಾತುಕತೆ ನಡೆಸಿದ ಬಳಿಕ, ಉಭಯ ದೇಶಗಳು 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು.

ಮೋದಿ ಹಾಗೂ ಡಿಸ್ಸನಾಯಕೆ ನಡುವಿನ ಮಾತುಕತೆ ನಂತರ ಒಟ್ಟು 10 ವಿಷಯಗಳ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಬಂದಿದ್ದರೂ, ರಕ್ಷಣಾ ಕ್ಷೇತ್ರವೇ ಪ್ರಮುಖ ವಿಚಾರವಾಗಿ ಹೊರಹೊಮ್ಮಿದೆ.

35 ವರ್ಷಗಳ ಹಿಂದೆ, ಶ್ರೀಲಂಕಾದಲ್ಲಿ ನಿಯೋಜನೆಗೊಂಡಿದ್ದ ಶಾಂತಿಪಾಲನಾ ಪಡೆಗಳನ್ನು ಭಾರತ ಹಿಂಪಡೆದಿತ್ತು. ಈ ಬೆಳವಣಿಗೆ ನಂತರ ತಾನು ಎದುರಿಸಿದ್ದ ಕಹಿ ದಿನಗಳಿಂದ ಹೊರಬಂದಂತಿರುವ ಶ್ರೀಲಂಕಾ, ರಕ್ಷಣಾ ಸಂಬಂಧ ಕುರಿತಂತೆ ಭಾರತದೊಂದಿಗೆ ಹೊಸ ಹೆಜ್ಜೆ ಹಾಕುವ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾತುಕತೆ ವೇಳೆ, ಮೀನುಗಾರರ ವಿಚಾರ ಪ್ರಸ್ತಾಪಿಸಿದ ಮೋದಿ, ‘ಮೀನುಗಾರರ ಸಮಸ್ಯೆ ಬಗೆಹರಿಸಲು ಎರಡೂ ದೇಶಗಳು ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದರು.

‘ದೇಶದಲ್ಲಿನ ತಮಿಳು ಜನರ ಬೇಡಿಕೆಗಳನ್ನು ಶ್ರೀಲಂಕಾ ಸರ್ಕಾರ ಈಡೇರಿಸಲಿದೆ ಹಾಗೂ ಪ್ರಾಂತೀಯ ಪರಿಷತ್ತು ಚುನಾವಣೆಗಳನ್ನು ನಡೆಸಲಿದೆ ಎಂಬ ಭರವಸೆ ಹೊಂದಿರುವೆ’ ಎಂದು ಮೋದಿ ಹೇಳಿದರು.

‘ನನ್ನ ತವರು ರಾಜ್ಯ ಗುಜರಾತ್‌ನ ಅರಾವಳಿ ಪ್ರದೇಶದಲ್ಲಿ 1960ರಲ್ಲಿ ಬುದ್ಧನಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಹೆಚ್ಚಿನ ಅಧ್ಯಯನ ಉದ್ದೇಶದಿಂದ ಈ ಅವಶೇಷಗಳನ್ನು ಶ್ರೀಲಂಕಾಕ್ಕೆ ಕಳುಹಿಸಲಾಗುತ್ತದೆ’ ಎಂದೂ ಮೋದಿ ಘೋಷಿಸಿದರು.

ತಮಿಳು ಮುಖಂಡರ ಭೇಟಿ: ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳ ತಮಿಳು ನಾಯಕರು ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದರು.

‘ಸಮಾನತೆ, ಘನತೆ ಹಾಗೂ ನ್ಯಾಯದಿಂದ ಕೂಡಿದ ಬದುಕು ಕಟ್ಟಿಕೊಳ್ಳಲು ಶ್ರೀಲಂಕಾದಲ್ಲಿನ ತಮಿಳು ಜನರಿಗೆ ಬೆಂಬಲಿಸಲು ಭಾರತ ಬದ್ಧವಾಗಿದೆ’ ಎಂದು ನಂತರ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಭಾರತದ ‘ನೆರೆ ದೇಶ ಮೊದಲ ನೀತಿ’ಯಲ್ಲಿ ಶ್ರೀಲಂಕಾಕ್ಕೆ ವಿಶೇಷ ಸ್ಥಾನ ಇದೆ. ಅಧ್ಯಕ್ಷ ಡಿಸ್ಸನಾಯಕೆ ಭಾರತಕ್ಕೆ ಭೇಟಿ ನೀಡಿದ ನಂತರ ಉಭಯ ದೇಶಗಳ  ನಡುವಿನ ಸಹಕಾರ ಮತ್ತಷ್ಟು ವೃದ್ಧಿಸಿದೆ
ನರೇಂದ್ರ ಮೋದಿ ಪ್ರಧಾನಿ
ಭಾರತದ ಭದ್ರತೆ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡುವಂತಹ ಯಾವುದೆ ಚಟುವಟಿಕೆಗಳಿಗೆ ತನ್ನ ನೆಲವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಶ್ರೀಲಂಕಾ ಅನುಮತಿ ನೀಡುವುದಿಲ್ಲ
ಅನುರಾ ಕುಮಾರ ಡಿಸ್ಸನಾಯಕೆ ಶ್ರೀಲಂಕಾ ಅಧ್ಯಕ್ಷ

ಹಲವು ಯೋಜನೆಗೆ ಸಹಾಯಹಸ್ತ

* ಟ್ರಿಂಕಾಮಲಿಯನ್ನು ಇಂಧನ ಹಬ್‌ ಆಗಿ ಅಭಿವೃದ್ಧಿಪಡಿಸುವುದು. ಟ್ರಿಂಕಾಮಲಿಯಲ್ಲಿನ ತಿರುಕೋಣೇಶ್ವರಮ್ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು

* ಪವಿತ್ರ ನಗರ ಅನುರಾಧಾಪುರದಲ್ಲಿ ಮಹಾಬೋಧಿ ದೇಗುಲ ಸಂಕೀರ್ಣ ಹಾಗೂ ನುವಾರಾ ಎಳಿಯದಲ್ಲಿ ಸೀತಾ ಎಳಿಯ ದೇವಸ್ಥಾನ ನಿರ್ಮಾಣಕ್ಕೆ ನೆರವು 

* ಪವರ್‌ ಗ್ರಿಡ್‌ ಸಂಪರ್ಕಕ್ಕೆ ಒತ್ತು. ಇದು ವಿದ್ಯುತ್‌ ರಫ್ತು ಕ್ಷೇತ್ರದಲ್ಲಿ ಶ್ರೀಲಂಕಾಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಆಶಯ

* ಸಾಲ ಮರುಹೊಂದಾಣಿಕೆಗೆ ಭಾರತ ಒಪ್ಪಿಗೆ. ಆರ್ಥಿಕ ನೆರವಿನ ಭಾಗವಾಗಿ ಶ್ರೀಲಂಕಾಕ್ಕೆ ನೀಡಿರುವ ಸಾಲದ ಬಡ್ಡಿ ದರ ಇಳಿಸಲು ನಿರ್ಧಾರ

* ಶ್ರೀಲಂಕಾದ ಪೂರ್ವಭಾಗದ ಪ್ರಾಂತ್ಯಗಳ ಆರ್ಥಿಕ ಅಭಿವೃದ್ಧಿಗೆ 2.4 ಶತಕೋಟಿ ಶ್ರೀಲಂಕಾ ರೂಪಾಯಿ ಒದಗಿಸುವುದಾಗಿ ಘೋಷಣೆ 

* ಶ್ರೀಲಂಕಾದ ‘ಯುನಿಕ್‌ ಡಿಜಿಟಲ್‌ ಐಡೆಂಟಿಟಿ ಪ್ರಾಜೆಕ್ಟ್‌’ಗೆ ನೆರವು ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.