
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಭಾರತ ನಿಲ್ಲಿಸಿದ್ದು, ಹೀಗಾಗಿ ಅವರ ಮೇಲೆ ನಾವು ವಿಧಿಸಿರುವ ಸುಂಕವನ್ನು ಇಳಿಕೆ ಮಾಡುತ್ತೇವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತದೊಂದಿಗೆ ವ್ಯಾಪಾರ ಒಪ್ಪಂದ ಎಷ್ಟು ನಿಕಟವಾಗಿದೆ? ಸುಂಕ ಇಳಿಸುವ ಪ್ರಸ್ತಾಪ ಇದೆಯೇ? ಎನ್ನುವ ಪತ್ರಕರ್ತರ ಪ್ರಶ್ನೆಗೆ ಟ್ರಂಪ್ ಹೀಗೆ ಉತ್ತರಿಸಿದ್ದಾರೆ.
‘ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದರಿಂದ ಭಾರತ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗುತ್ತಿತ್ತು. ಈಗ ಅವರು ಖರೀದಿಯನ್ನು ನಿಲ್ಲಿಸಿದ್ದಾರೆ. ಖರೀದಿ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಹೀಗಾಗಿ ನಾವು ಸುಂಕವನ್ನು ಕಡಿಮೆ ಮಾಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅದು ಈ ಹಿಂದಿನವುಗಳಿಗಿಂತ ಭಿನ್ನವಾಗಿರಲಿದೆ. ಸದ್ಯ ಅವರು ನನ್ನ ಬಗ್ಗೆ ಒಲವು ತೋರಿಸುತ್ತಿಲ್ಲ. ಆದರೆ ಅವರು ಅಮೆರಿಕದ ಬಗ್ಗೆ ಮತ್ತೆ ಒಲವು ತೋರಲಿದ್ದಾರೆ. ನಾವು ನ್ಯಾಯಯುತ ಒಪ್ಪಂದ ಮಾಡಿಕೊಳ್ಳುತ್ತೇವೆ. ಈ ಹಿಂದೆ ನ್ಯಾಯಯುತವಲ್ಲದ ಒಪ್ಪಂದ ಒತ್ತು. ನಾವು ಈಗ ಹತ್ತಿರವಾಗುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಭಾರತೀಯ ರಾಯಭಾರಿಯಾಗಿ ಸರ್ಜಿಯೊ ಗೌರ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಮ್ಮ ದೇಶದ ಪ್ರಮುಖ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಒಂದಾದ ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಸರ್ಜಿಯೊ ಸಹಾಯ ಮಾಡುತ್ತಾರೆ ಎಂದು ನಾನು ನಂಬುತ್ತೇನೆ. ಭಾರತವು ವಿಶ್ವದ ಪುರಾತನ ನಾಗರಿಕತೆಗಳಲ್ಲಿ ಒಂದು. ವಿಶ್ವದ ಅತಿದೊಡ್ಡ ದೇಶ. 1.5 ಶತಕೋಟಿಗೂ ಹೆಚ್ಚು ಜನರನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ನಾವು ಪ್ರಧಾನಿ ಮೋದಿಯವರೊಂದಿಗೆ ಅದ್ಭುತ ಸಂಬಂಧ ಹೊಂದಿದ್ದೇವೆ. ಸರ್ಜಿಯೊ ಅವರು ಈಗಾಗಲೇ ಪ್ರಧಾನಿಯೊಂದಿಗೆ ಸ್ನೇಹಪರರಾಗಿದ್ದಾರೆ. ಭಾರತ ಅತಿ ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗ. ಮಾತ್ರವಲ್ಲದೆ ಇಂಡೊ-ಪೆಸಿಫಿಕ್ ವಲಯದಲ್ಲಿ ಪ್ರಮುಖ ಆರ್ಥಿಕ ಮತ್ತು ಕಾರ್ಯತಂತ್ರದ ಭದ್ರತಾ ಪಾಲುದಾರ’ ಎಂದು ಟ್ರಂಪ್ ಹೇಳಿದ್ದಾರೆ.
(ಮೂಲ: ಶ್ವೇತಭವನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.