ಬೀಜಿಂಗ್: ಕೊರೊನಾ ವೈರಸ್ ಪರಿಣಾಮ ಚೀನಿಯರು ಹಾಗೂ ಚೀನಾದಲ್ಲಿ ನೆಲೆಸಿರುವ ಇತರೆ ಯಾವುದೇ ದೇಶದ ಪ್ರವಾಸಿಗರಿಗೆ ಭಾರತ ಭಾನುವಾರತಾತ್ಕಾಲಿಕ ನಿಷೇಧ ಹೇರಿದೆ.
ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಬೆಳವಣಿಗೆಗಳಿಂದಾಗಿ ಭಾರತಕ್ಕೆ ತೆರಳಲು ನೀಡುವ ಇ-ವೀಸಾವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ನಿಯಮ ಚೀನಿಯರು ಹಾಗೂ ಚೀನಾದಲ್ಲಿರುವ ಇತರೆ ದೇಶಗಳ ನಿವಾಸಿಗಳಿಗೂ ಅನ್ವಯಿಸುತ್ತದೆ. ಈಗಾಗಲೇ ನೀಡಲಾಗಿರುವ ಇ-ವೀಸಾಗಳಿಗೆ ದೀರ್ಘಕಾಲದ ಮಾನ್ಯತೆ ಇರುವುದಿಲ್ಲ ಎಂದು ತಿಳಿಸಿದೆ.
ಭಾರತಕ್ಕೆ ಭೇಟಿ ನೀಡಲೇಬೇಕು ಎಂದು ಬಯಸುವ ಚೀನಾ ನಿವಾಸಿಗಳು ಅಥವಾ ಚೀನಾದಲ್ಲಿರುವ ಇತರೆ ದೇಶಗಳ ಪ್ರಜೆಗಳು ಬೀಜಿಂಗ್, ಶಾಂಗೈ ಅಥವಾ ಗುವಾಂಗ್ಜೊ ನಗರಗಳ ಭಾರತೀಯ ರಾಯಭಾರ ಕಚೇರಿಗಳಿಗೆ ಭೇಟಿ ನೀಡಿ ವೀಸಾಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಕೊರೊನಾ ವೈರಸ್‌ನಿಂದ ನಲುಗಿರುವ ಚೀನಾದಿಂದ 7 ಮಂದಿ ಮಾಲ್ಡೀವ್ ಪ್ರಜೆಗಳೂ ಸೇರಿದಂತೆ 323 ಮಂದಿ ಭಾರತೀಯರನ್ನು ಒಳಗೊಂಡ ಎರಡನೇ ತಂಡವನ್ನು ಭಾನುವಾರ ವಿಮಾನದ ಮೂಲಕ ಕರೆತರಲಾಗಿದೆ. ಶನಿವಾರ ಬೆಳಗಿನ ಜಾವ 324 ಮಂದಿ ಭಾರತೀಯರನ್ನು ಒಳಗೊಂಡ ಮೊದಲ ತಂಡ ಭಾರತಕ್ಕೆ ಕರೆತರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.