
ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಭಾರತವು ಇರಾನ್ ಬದಲಿಗೆ ವೆನೆಜುವೆಲಾದಿಂದ ಕಚ್ಚಾತೈಲವನ್ನು ಖರೀದಿ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ವೆನೆಜುವೆಲಾಗೆ ನೀಡಿರುವ ಸಾಲವನ್ನು ಚೀನಾ ವಾಪಸ್ ಪಡೆಯಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಶನಿವಾರ ಉತ್ತರಿಸಿದ ಟ್ರಂಪ್, ‘ತೈಲ ಖರೀದಿಗೆ ಸಂಬಂಧಿಸಿದಂತೆ ವೆನೆಜುವೆಲಾದೊಂದಿಗೆ ಚೀನಾ ಒಪ್ಪಂದ ಮಾಡಿಕೊಳ್ಳುವುದಾದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಭಾರತವೂ ಇರಾನ್ ಬದಲಾಗಿ ವೆನೆಜುವೆಲಾದಿಂದ ತೈಲ ಖರೀದಿಗೆ ಮುಂದಾಗಿದೆ. ಈ ಸಂಬಂಧ ಒಪ್ಪಂದ ಚಾಲ್ತಿಯಲ್ಲಿದೆ’ ಎಂದು ಹೇಳಿದರು.
ಟ್ರಂಪ್ ಹೇಳಿಕೆಯ ಬಗ್ಗೆ ಭಾರತ ಸರ್ಕಾರ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತವು 2019ರವರೆಗೂ ಇರಾನ್‌ನಿಂದ ಕಚ್ಚಾತೈಲ ಖರೀದಿಸುವ ಪ್ರಮುಖ ರಾಷ್ಟ್ರವಾಗಿತ್ತು. ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿದ ಬಳಿಕ ಆಮದು ಪ್ರಮಾಣ ಗಮನಾರ್ಹವಾಗಿ ತಗ್ಗಿತು. ನಿರ್ಬಂಧ ವಿಧಿಸಿರುವ ದೇಶಗಳಿಂದ ಕಚ್ಚಾತೈಲ ಖರೀದಿಯನ್ನು ನಿಲ್ಲಿಸುವಂತೆ ಪ್ರಮುಖ ಆಮದುದಾರ ದೇಶಗಳಿಗೆ ಅಮೆರಿಕ ಒತ್ತಡ ಹೇರುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದೆ. ಇದೇ ಕಾರಣಕ್ಕಾಗಿ ಅಮೆರಿಕವು ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವೆನೆಜುವೆಲಾ ಹಂಗಾಮಿ ಅಧ್ಯಕ್ಷ ಡೆಲ್ಸಿ ರಾಡ್ರಿಗಸ್ ಅವರೊಂದಿಗೆ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಬಗ್ಗೆ ಪರಸ್ಪರ ಸಹಮತ ವ್ಯಕ್ತಪಡಿಸಿದ್ದರು.
ಮೋದಿ ಸರ್ಕಾರದ ವಿರುದ್ಧ ‘ಕೈ’ ವಾಗ್ದಾಳಿ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ. ‘ನಮ್ಮ ಸರ್ಕಾರ ಏನು ಮಾಡಿದೆ ಅಥವಾ ಏನು ಮಾಡಲಿದೆ ಎಂಬ ಮಾಹಿತಿ ನೀಡುವುದನ್ನು ಅಮೆರಿಕ ಅಧ್ಯಕ್ಷರು ಮುಂದುವರಿಸಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಟ್ರಂಪ್ ಅವರು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದರು. ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದೆ ಎಂದೂ ಹೇಳಿದ್ದರು. ಈಗ ವೆನೆಜುವೆಲಾದಿಂದ ತೈಲ ಖರೀದಿಗೆ ಒಪ್ಪಂದವಾಗಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರದ ನಡೆಯ ಕುರಿತು ಮಾಹಿತಿ ನೀಡುವುದನ್ನು ಅವರು ಮುಂದುವರಿಸಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಕ್ಯೂಬಾದೊಂದಿಗೆ ಮಾತುಕತೆ: ಟ್ರಂಪ್
ಕ್ಯೂಬಾ ದೇಶದ ನಾಯಕರೊಂದಿಗೆ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ವೆನೆಜುವೆಲಾ ಮತ್ತು ಮೆಕ್ಸಿಕೊದಿಂದ ಕ್ಯೂಬಾ ದ್ವೀಪ ರಾಷ್ಟ್ರಕ್ಕೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿದರು. ಆದರೆ ಕ್ಯೂಬಾ ದೇಶದ ಜೊತೆಗಿನ ಅಮೆರಿಕ ಒಪ್ಪಂದದ ಉದ್ದೇಶವೇನು ಎಂಬುದು ಅಸ್ಪಷ್ಟವಾಗಿದೆ. ಮಾತುಕತೆಯು ಯಾವ ಹಂತದಲ್ಲಿದೆ ಎಂಬ ಬಗ್ಗೆಯೂ ಟ್ರಂಪ್ ಅವರು ಮಾಹಿತಿ ನೀಡಿಲ್ಲ. ಜನವರಿ ಆರಂಭದಲ್ಲಿ ವೆನೆಜುವೆಲಾವನ್ನು ಅಮೆರಿಕ ವಶಕ್ಕೆ ಪಡೆದ ನಂತರದಲ್ಲಿ ಟ್ರಂಪ್ ಅವರು ಕ್ಯೂಬಾ ದೇಶದತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಕ್ಯೂಬಾಕ್ಕೆ ತೈಲ ಮಾರಾಟ ಮಾಡುವ ದೇಶಗಳ ಮೇಲೆ ಅಧಿಕ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.