ನರೇಂದ್ರ ಮೋದಿ ಮತ್ತು ಕಿಯರ್ ಸ್ಟಾರ್ಮರ್
ನವದೆಹಲಿ: ಭಾರತ ಮತ್ತು ಬ್ರಿಟನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದವನ್ನು ಅಧಿಕೃತವಾಗಿ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ) ಎಂದು ಕರೆಯಲಾಗಿದೆ.
ಲಂಡನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಸಮ್ಮುಖದಲ್ಲಿ ಉಭಯ ದೇಶಗಳ ವಾಣಿಜ್ಯ ಸಚಿವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
‘ಭಾರತ ಮತ್ತು ಬ್ರಿಟನ್ ಆರ್ಥಿಕ ಪಾಲುದಾರಿಕೆಯಲ್ಲಿ ಇಂದು ಹೊಸ ಅಧ್ಯಾಯ ಆರಂಭ!. ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ (ಸಿಇಟಿಎ) ಸಹಿ ಹಾಕಿರುವುದು ವ್ಯಾಪಾರ ವಹಿವಾಟು ಹೆಚ್ಚಿಸುವ, ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ರೈತರು, ಮಹಿಳೆಯರು, ಯುವಕರು, ಎಂಎಸ್‌ಎಂಇಗಳು ಮತ್ತು ವೃತ್ತಿಪರರಿಗೆ ಅವಕಾಶಗಳನ್ನು ಕಲ್ಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಪ್ರಧಾನಿ ಮೋದಿ ಅವರು ‘ಎಕ್ಸ್’ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
‘ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವು ನಮ್ಮ ಹೆಗ್ಗುರುತು ಮತ್ತು ಬ್ರಿಟನ್‌ಗೆ ಸಿಕ್ಕ ಒಂದು ಪ್ರಮುಖ ಗೆಲುವಾಗಿದೆ. ಇದು ಕಷ್ಟಪಟ್ಟು ದುಡಿಯುವ ದೇಶದ ಜನರ (ಬ್ರಿಟಿಷರ) ಜೇಬಿನಲ್ಲಿ ಹೆಚ್ಚಿನ ಹಣ ಉಳಿಸುವ ಮತ್ತು ಜೀವನ ನಿರ್ವಹಣೆ ವೆಚ್ಚ ಕಡಿಮೆ ಮಾಡಲು ಅನುಕೂಲವಾಗಲಿದೆ’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. ಮೇ 6ರಂದು ವ್ಯಾಪಾರ ಮಾತುಕತೆಗಳು ಪೂರ್ಣಗೊಂಡಿವೆ.
ಈ ಒಪ್ಪಂದದಿಂದ ಬ್ರಿಟನ್‌ನಲ್ಲಿ ಮಾರಾಟ ಆಗುವ ಭಾರತದ ಚರ್ಮದ ಉತ್ಪನ್ನಗಳು, ಪಾದರಕ್ಷೆಗಳು ಮತ್ತು ಜವಳಿ ಉತ್ಪನ್ನಗಳ ಮೇಲಿನ ರಫ್ತು ಸುಂಕ ಕಡಿಮೆಯಾಗಲಿದೆ. ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ವಿಸ್ಕಿ, ಕಾರುಗಳು ಅಗ್ಗವಾಗಲಿವೆ. ಈ ಒಪ್ಪಂದದಿಂದ ಉಭಯ ದೇಶಗಳ ನಡುವಿನ ವ್ಯಾಪಾರವು 2030ರ ವೇಳೆಗೆ ₹10.33 ಲಕ್ಷ ಕೋಟಿ (120 ಬಿಲಿಯನ್ ಡಾಲರ್) ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಫ್‌ಟಿಎಗೆ ಸಹಿ ಬಿದ್ದಿದ್ದು, ಇದರ ಜಾರಿಗೆ ಬ್ರಿಟನ್ ಸಂಸತ್ತು ಮತ್ತು ಭಾರತದ ಸಚಿವ ಸಂಪುಟದ ಅನುಮೋದನೆ ಬೇಕಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.