
ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಫ್ಯಾಕ್ಟ್ ಶೀಟ್ ಅನ್ನು ಶ್ವೇತಭವನ ಸೋಮವಾರ ಬಿಡುಗಡೆ ಮಾಡಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (ಬಿಟಿಎ) ರೂಪುರೇಷೆ, ನಿಬಂಧನೆಗಳನ್ನು ಒಳಗೊಂಡ ಫ್ಯಾಕ್ಟ್ ಶೀಟ್‌ಅನ್ನು, 'ಮುಂದಿನ ಸಮೃದ್ಧ ಹಾದಿ' ಎಂದೇ ಬಣ್ಣಿಸಲಾಗಿದೆ. ಇದರಲ್ಲಿರುವ ಅಂಶಗಳು ಯಥಾವತ್ ಜಾರಿಗೊಂಡರೆ, ಅದು ಭಾರತ ಕೃಷಿ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.
ಭಾರತ–ಅಮೆರಿಕ ನಡುವೆ ಫೆಬ್ರುವರಿ 6ರಂದು ಮಧ್ಯಂತರ ಒಪ್ಪಂದದ ಚೌಕಟ್ಟನ್ನು ರೂಪುಗೊಂಡಿದೆ. ಇದಾದ ಮೂರು ದಿನಗಳಲ್ಲೇ ಫ್ಯಾಕ್ಟ್ ಶೀಟ್ ಬಿಡುಗಡೆಗೊಂಡಿದೆ.
ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ಮುನ್ನ 'ಹೂಡಿಕೆ, ಸೇವೆ, ಕಾರ್ಮಿಕ ವಲಯ, ತಾಂತ್ರಿಕ ಅಡೆತಡೆ, ಭೌತಿಕ ಆಸ್ತಿ, ಕಸ್ಟಮ್ಸ್, ಸರಕುಗಳ ಸಂಗ್ರಹ, ವ್ಯಾಪಾರ ಅಕ್ರಮ ತಡೆ ಸೇರಿದಂತೆ ಕೆಲವು ವಿಷಯಗಳು ಇತ್ಯರ್ಥವಾಗಬೇಕಿವೆ. ಆ ನಿಟ್ಟಿನಲ್ಲಿ ಉಭಯ ದೇಶಗಳು ಮಾತುಕತೆಯಲ್ಲಿ ತೊಡಗಿದ್ದು, ಕೆಲವೇ ವಾರಗಳಲ್ಲಿ ಒಪ್ಪಂದ ಅಂತಿಮಗೊಳ್ಳಲಿದೆ. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಉಭಯ ದೇಶಗಳಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನಕಾರಿಯಾಗಲಿದೆ' ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಭಾರತದ ಒಪ್ಪಿಗೆ
ಅಮೆರಿಕದಿಂದ ಇಂಧನ, ಮಾಹಿತಿ ತಂತ್ರಜ್ಞಾನ, ಸಂವಹನ, ಕಲ್ಲಿದ್ದಲು, ಕೃಷಿ ಮತ್ತು ಇತರೆ ವಲಯಗಳ ಉತ್ಪನ್ನಗಳು ಸೇರಿ ಒಟ್ಟು 500 ಬಿಲಿಯನ್ ಡಾಲರ್‌ಗಿಂತ (ಸರಿಸುಮಾರು ₹45.28 ಲಕ್ಷ ಕೋಟಿ) ಹೆಚ್ಚಿನ ಮೊತ್ತದ ಸರಕಗಳನ್ನು ಖರೀದಿಸಲು ಭಾರತ ಒಪ್ಪಿಕೊಂಡಿದೆ.
ಅಮೆರಿಕದ ಆದ್ಯತೆ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಒಪ್ಪಂದದ ಮೂಲಕ ಅಮೆರಿಕದ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆ ರಕ್ಷಿಸಲು ಮತ್ತು ಅಲ್ಲಿನ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸುಂಕ ಮತ್ತು ಸುಂಕ ರಹಿತ ಸರಕುಗಳ ನಡುವಿನ ವ್ಯಾಪಾರ ಅಡೆತಡೆ ನಿವಾರಿಸಲು ಯತ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.