ADVERTISEMENT

ಭಾರತದ ಜೊತೆ ವ್ಯಾಪಾರ ಒಪ್ಪಂದ: ಡೊನಾಲ್ಡ್ ಟ್ರಂಪ್

ಪಿಟಿಐ
Published 29 ಅಕ್ಟೋಬರ್ 2025, 7:12 IST
Last Updated 29 ಅಕ್ಟೋಬರ್ 2025, 7:12 IST
<div class="paragraphs"><p>ನರೇಂದ್ರ ಮೋದಿ ಮತ್ತು&nbsp;ಡೊನಾಲ್ಡ್ ಟ್ರಂಪ್</p></div>

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್

   

ಕೃಪೆ: ಪಿಟಿಐ

ಸೋಲ್: ಅಮೆರಿಕವು ಭಾರತದ ಜೊತೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬುಧವಾರ ಹೇಳಿದ್ದಾರೆ. ಒಪ್ಪಂದದ ವಿಚಾರವಾಗಿ ಅಮೆರಿಕ ಮತ್ತು ಭಾರತದ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ.

ADVERTISEMENT

ಏಷ್ಯಾ ಪೆಸಿಫಿಕ್‌ ಆರ್ಥಿಕ ಸಹಕಾರ – ಸಿಇಒ ಶೃಂಗದಲ್ಲಿ ಮಾತನಾಡಿದ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ‘ಅಪಾರ ಗೌರವ ಹಾಗೂ ಪ್ರೀತಿ’ ಇರುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆಗಿನ ತಮ್ಮ ಸ್ನೇಹ ಬಹಳ ದೊಡ್ಡದು ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ.

ಆದರೆ ವಾಣಿಜ್ಯ ಒಪ್ಪಂದದ ಕುರಿತಾಗಿ ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ. 

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಕ್ವಾಲಾಲಂಪುರದಲ್ಲಿ ಸೋಮವಾರ ಭೇಟಿಯಾಗಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ವ್ಯಾಪಾರ ಒಪ್ಪಂದದ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆಯನ್ನು ರದ್ದುಪಡಿಸುವ ಬಗ್ಗೆ ಅಮೆರಿಕದಿಂದ ಭರವಸೆ ಸಿಕ್ಕಿರುವ ಸೂಚನೆ ಇಲ್ಲ.

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಭಾರತದ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದಾರೆ.

‘ಮೋದಿ ಅವರು ಕಠಿಣ ಮನುಷ್ಯ’

ಟೊಕಿಯೊ/ಸೋಲ್‌: ‘ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಕಠಿಣ ಮನುಷ್ಯ. ಬಹಳ ಸುಂದರವಾಗಿದ್ದಾರೆ ಕೂಡ. ನೀವು ಅವರನ್ನು ನೋಡಿದರೆ, ಅವರನ್ನು ತಂದೆಯನ್ನಾಗಿ ಪಡೆಯಬೇಕಿತ್ತು ಅನ್ನಿಸುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು.

ಟೊಕಿಯೊದಲ್ಲಿ ಉದ್ಯಮಿಗಳ ಜೊತೆ ಮಂಗಳವಾರ ಆಯೋಜಿಸಲಾಗಿದ್ದ ಭೋಜನ ಕೂಟದ ವೇಳೆ ಮತ್ತು ಬುಧವಾರ ದಕ್ಷಿಣ ಕೊರಿಯಾದಲ್ಲಿ ಏಷ್ಯಾ–ಪೆಸಿಫಿಕ್‌ ಆರ್ಥಿಕ ಸಹಕಾರ ಸಿಇಒ ಶೃಂಗದಲ್ಲೂ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

‘ನಾನು ಅವರಿಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದೆ. ಅದಕ್ಕೆ ಅವರು (ಮೋದಿ) ಪ್ರತಿಕ್ರಿಯಿಸಿ, ‘ಇಲ್ಲ, ಇಲ್ಲ, ನಾವು ವ್ಯಾಪಾರ ಮಾಡಿಕೊಳ್ಳಲೇಬೇಕು’ ಎಂದರು. ಇಲ್ಲ ಇದು ಸಾಧ್ಯವಿಲ್ಲ. ನೀವು ಪಾಕಿಸ್ತಾನದೊಂದಿಗೆ ಯುದ್ಧ ಆರಂಭಿಸಿದ್ದೀರಿ ಎಂದು ನಾನು ಉತ್ತರಿಸಿದೆ’ ಎಂದು ವಿವರಿಸಿದರು. ‘ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಅಸೀಮ್‌ ಮುನೀರ್‌ ಅವರು ಕೂಡ ಉತ್ತಮ ಹೋರಾಟಗಾರ ಮತ್ತು ಬಹಳ ಒಳ್ಳೆಯ ಮನುಷ್ಯ’ ಎಂದು ಟ್ರಂಪ್‌ ಹೇಳಿದರು.

‘ನಾನು ಪಾಕಿಸ್ತಾನಕ್ಕೂ ಕರೆ ಮಾಡಿದ್ದೆ. ನಿಮ್ಮಿಬ್ಬರ ಬಳಿಯೂ ಪರಮಾಣು ಶಕ್ತಿ ಇದೆ ಎಂದು ನಿಮಗೆ ಗೊತ್ತಿದೆ ಅಲ್ಲವೇ. ನೀವು ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿದ್ದೀರಿ. ಆದ್ದರಿಂದ ನಾನು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದೆ. ಇಲ್ಲ, ಇಲ್ಲ, ಇಲ್ಲ ನಾವು ಹೋರಾಡಲು ನೀವು ಅನುವು ಮಾಡಿಕೊಡಬೇಕು ಎಂದು ಅವರು ಪ್ರತಿಕ್ರಿಯಿಸಿದರು. ಭಾರತ ಕೂಡ ಹೀಗೆಯೇ ಹೇಳಿತ್ತು’ ಎಂದರು.

‘ನಿಜವಾಗಿಯೂ ಎರಡನೇ ದಿನದ ಬಳಿಕ ಇಬ್ಬರೂ ಕರೆ ಮಾಡಿದರು. ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದರು. ಬಳಿಕ ಇಬ್ಬರೂ ಯುದ್ಧ ನಿಲ್ಲಿಸಿದರು. ಚೆನ್ನಾಗಿ ಆಯಿತು ಅಲ್ಲವೇ? ಬೈಡನ್‌ ಅವರು ಈ ರೀತಿ ಮಾಡುತ್ತಿದ್ದರು ಎಂದು ನಿಮಗೆ ಅನ್ನಿಸುತ್ತದೆಯೇ?’ ಎಂದರು.

ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ವೇಳೆ ಹೊಸದಾದ ಏಳು ವಿಮಾನಗಳನ್ನೂ ಹೊಡೆದುರುಳಿಸಲಾಗಿದೆ.
-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ (ಯಾವ ದೇಶದ ವಿಮಾನವನ್ನು ಯಾರು ಹೊಡೆದುರುಳಿಸಿದರು ಎಂದು ತಮ್ಮ ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಲಿಲ್ಲ)
ಒಂದಾದ ಮೇಲೊಂದು ದೇಶದಲ್ಲಿ ಟ್ರಂಪ್‌ ಅವರು ಮೋದಿ ಮಾನ ತೆಗೆಯುತ್ತಿದ್ದಾರೆ. ದಕ್ಷಿಣ ಕೊರಿಯಾದ್ದು ಹೊಸತು. ಆಪರೇಷನ್‌ ಸಿಂಧೂರ ನಿಲ್ಲಿಸಲು ವ್ಯಾಪಾರವನ್ನು ಮುಂದಿಟ್ಟು ಮೋದಿ ಅವರನ್ನು ಬೆದರಿಸಲಾಯಿತು ಎಂದು ಟ್ರಂಪ್‌ ಮತ್ತೊಮ್ಮೆ ಹೇಳಿದ್ದಾರೆ. ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದೂ ಹೇಳಿದರು. ಮೋದಿ ಅವರೇ ಭಯಪಡಬೇಡಿ. ಧೈರ್ಯವಾಗಿ ಪ್ರತಿಕ್ರಿಯಿಸಿ.
-ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.