ADVERTISEMENT

ಭಾರತದ ಅಗ್ಗದ ಲಸಿಕೆ ಪೂರೈಕೆ ಸ್ಥಗಿತ: ಆರ್ಥಿಕತೆ ಮೇಲೆ ಪರಿಣಾಮ;ಪಾಕ್ ಆರೋಗ್ಯ ಸಚಿವ

ಪಿಟಿಐ
Published 7 ಫೆಬ್ರುವರಿ 2026, 13:46 IST
Last Updated 7 ಫೆಬ್ರುವರಿ 2026, 13:46 IST
.
.   

ಕರಾಚಿ: ‘ಕಳೆದ ವರ್ಷ ಮೇನಲ್ಲಿ ನಡೆದ ಸಂಘರ್ಷದ ನಂತರ ಭಾರತದಿಂದ ಕಡಿಮೆ ವೆಚ್ಚದ ಲಸಿಕೆಗಳ ಪೂರೈಕೆ ಸ್ಥಗಿತಗೊಂಡಿದೆ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ’ ಎಂದು ಪಾಕಿಸ್ತಾನ ಆರೋಗ್ಯ ಸಚಿವ ಮುಸ್ತಫಾ ಕಮಾಲ್‌ ಶನಿವಾರ ತಿಳಿಸಿದ್ದಾರೆ.

ವಿಶ್ವದ ಬಡ ರಾಷ್ಟ್ರಗಳ ಮಕ್ಕಳಿಗೆ ಲಸಿಕೆಗಳನ್ನು ಒದಗಿಸಲು ಶ್ರಮಿಸುತ್ತಿರುವ ಸಾರ್ವಜನಿಕ–ಖಾಸಗಿ ಪಾಲುದಾರಿಕೆಯ ಗ್ಲೋಬಲ್‌ ಅಲಯನ್ಸ್‌ ಫಾರ್‌ ವ್ಯಾಕ್ಸಿನ್ಸ್‌ ಆ್ಯಂಡ್‌ ಇಮ್ಯುನೈಸೇಶನ್‌ (ಜಿಎವಿಐ) ಕಾರ್ಯಕ್ರಮದ ಮೂಲಕ ಪಾಕಿಸ್ತಾನಕ್ಕೆ ಅಗ್ಗದ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತಿದೆ.

‘ಪಾಕಿಸ್ತಾನವು ವಾರ್ಷಿಕ ಸುಮಾರು 400 ಮಿಲಿಯನ್‌ ಡಾಲರ್‌ (ಸುಮಾರು ₹3,623 ಕೋಟಿ) ವೆಚ್ಚದ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದರ ಶೇ 49ರಷ್ಟು ವೆಚ್ಚವನ್ನು ಜಿಎವಿಐ ಮೂಲಕ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ಸಂಸ್ಥೆಗಳು ಭರಿಸುತ್ತವೆ. ಉಳಿದ ವೆಚ್ಚವನ್ನು ಪಾಕಿಸ್ತಾನ ಭರಿಸುತ್ತದೆ’ ಎಂದು ಕಮಾಲ್‌ ಹೇಳಿದ್ದಾರೆ.

ADVERTISEMENT

‘ನಾವು ಸ್ಥಳೀಯವಾಗಿ ಲಸಿಕೆಗಳ ಉತ್ಪಾದನೆ ಪ್ರಾರಂಭಿಸದಿದ್ದರೆ, ಇವುಗಳ ಆಮದಿಗಾಗಿ 2031ರ ವೇಳೆಗೆ ವಾರ್ಷಿಕ 1.2 ಬಿಲಿಯನ್‌ ಡಾಲರ್‌ (ಸುಮಾರು ₹10,869 ಕೋಟಿ) ವೆಚ್ಚ ಮಾಡಬೇಕಾಗುತ್ತದೆ. ಲಸಿಕೆಗಳ ಪೂರೈಕೆಗಾಗಿ ಸಿಗುತ್ತಿರುವ ಅಂತರರಾಷ್ಟ್ರೀಯ ಬೆಂಬಲವು 2031ರ ವೇಳೆಗೆ ಕೊನೆಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

‘ಜಿಎವಿಐ ಸಂಸ್ಥೆಯು ಭಾರತದ ಔಷಧ ಕಂಪನಿಗಳು ತಯಾರಿಸಿದ ಕಡಿಮೆ ವೆಚ್ಚದ ಮತ್ತು ಉತ್ತಮ ಗುಣಮಟ್ಟದ ಲಸಿಕೆಗಳನ್ನು ಪಡೆಯಲು ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೊರತಾಗಿಯೂ ಇದು ಸಾಧ್ಯವಾಗಿದೆ. ಕೋವಿಡ್‌–19 ಸಂದರ್ಭದಲ್ಲಿ ಕೋವ್ಯಾಕ್ಸ್‌ ಸೌಲಭ್ಯದ ಅಡಿಯಲ್ಲಿ ಭಾರತದಿಂದ ಲಕ್ಷಾಂತರ ಕೋವಿಡ್‌ ಲಸಿಕೆಗಳನ್ನು ಪಡೆಯಲು ಜಿಎವಿಐ ಸಹಾಯ ಮಾಡಿದೆ’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರವು ಸದ್ಯ 13 ವಿಧದ ಲಸಿಕೆಗಳನ್ನು ನಾಗರಿಕರಿಗೆ ಉಚಿತವಾಗಿ ನೀಡುತ್ತಿದೆ. ಆದರೆ, ಇವು ಸ್ಥಳೀಯವಾಗಿ ಉತ್ಪಾದನೆಯಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.