ADVERTISEMENT

ಟ್ರಂಪ್ ವಿರುದ್ಧದ ವಾಗ್ದಂಡನೆಗೆ ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳ ಬೆಂಬಲ

ಏಜೆನ್ಸೀಸ್
Published 11 ಫೆಬ್ರುವರಿ 2021, 4:36 IST
Last Updated 11 ಫೆಬ್ರುವರಿ 2021, 4:36 IST
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆಗೆ ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜ.6ರಂದು ಕ್ಯಾಪಿಟಲ್‌ ಹಿಲ್‌ ಮೇಲೆ ನಡೆದ ದಾಳಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಟ್ರಂಪ್‌ ವಿರುದ್ಧ ವಾಗ್ದಂಡನೆ ಮಂಡಿಸಲು ನಿರ್ಧರಿಸಲಾಗಿತ್ತು.

ಟ್ರಂಪ್ ಅಧಿಕಾರದಲ್ಲಿದ್ದಾಗಲೇ ಸಂಸತ್ ಸಭೆಯಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆದಿತ್ತು. ಅವರು ಕೆಳಗಿಳಿದ ಮೂರು ವಾರದ ಬಳಿಕ ಸೆನೆಟ್‌ನಲ್ಲಿ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದೆ.

ADVERTISEMENT

ವಾಗ್ದಂಡನೆ ವಿಚಾರವಾಗಿ ಮಾತನಾಡಿರುವ ಭಾರತೀಯ ಅಮೆರಿಕನ್‌ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ, 'ಕ್ಯಾಪಿಟಲ್ ಸೇರಿದಂತೆ ಅಮೆರಿಕದ ಪ್ರಜಾತಾಂತ್ರಿಕ ಸಂಸ್ಥೆಗಳ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ ಜನಸಮೂಹಕ್ಕೆ ಟ್ರಂಪ್‌ ಪ್ರಚೋದನೆ ನೀಡಿದ್ದು ದೃಢಪಟ್ಟಿದೆ' ಎಂದು ತಿಳಿಸಿದ್ದಾರೆ.

'ಅಮೆರಿಕದ ಜನ ಪ್ರತಿನಿಧಿಗಳು, ಸೆನೆಟರ್‌ಗಳು ಮತ್ತು ಅವರ ಸಿಬ್ಬಂದಿ ತಮ್ಮ ಪ್ರಾಣ ರಕ್ಷಣೆಗಾಗಿ ಪಲಾಯನ ಮಾಡುವ ಮತ್ತು ಪ್ರಾರ್ಥಿಸುವ ಅನಿವಾರ್ಯತೆ ಬಂದೊದಗಿತು' ಎಂದು ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.

ವಲಸೆ ನೀತಿಗಳ ಕುರಿತ ಟಾಸ್ಕ್‌ಫೋರ್ಸ್‌ ‘ಕಾಂಗ್ರೆಸ್‌ನಲ್‌ ಏಷ್ಯನ್‌ ಪೆಸಿಫಿಕ್‌ ಅಮೆರಿಕನ್‌ ಕಾಕಸ್‌’ನ (ಸಿಎಪಿಎಸಿ) ಸಹ ಚೇರ್ಮನ್‌ ಆಗಿ ಭಾರತೀಯ ಅಮೆರಿಕನ್‌ ಪ್ರಜೆ ರಾಜಾ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

ರಾಜಾ ಕೃಷ್ಣಮೂರ್ತಿ ಸೇರಿದಂತೆ ಇತರ ಮೂವರು ಭಾರತೀಯ ಅಮೆರಿಕನ್‌ ಜನಪ್ರತಿನಿಧಿಗಳಾದ ಡಾ. ಅಮಿ ಬೇರಾ, ಪ್ರಮೀಳಾ ಜಯಪಾಲ್, ರೊ ಖನ್ನಾ ಅವರು ಟ್ರಂಪ್‌ ವಾಗ್ದಂಡನೆ ಪರವಾಗಿ ಮತ ಚಲಾಯಿಸಿದ್ದಾರೆ.

ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಕ್ಯಾಪಿಟಲ್ (ಸಂಸತ್‌) ಕಟ್ಟಡದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ಸಮಯದಲ್ಲಿ ಟ್ರಂಪ್ ಬೆಂಬಲಿಗರು ಭದ್ರತೆ ಉಲ್ಲಂಘಿಸಿ ಕಟ್ಟಡದೊಳಗೆ ನುಗ್ಗಿ ಗದ್ದಲ ಎಬ್ಬಿಸಿದ್ದರು. ತಕ್ಷಣ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತರಾಗಿದ್ದರು. ಭಾರತೀಯ ಅಮೆರಿಕನ್‌ ಜನಪ್ರತಿನಿಧಿಗಳಾದ ಡಾ. ಅಮಿ ಬೇರಾ, ಪ್ರಮೀಳಾ ಜಯಪಾಲ್, ರೊ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ ಅವರನ್ನೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.