ADVERTISEMENT

ಬಜೆಟ್‌ ವಿಭಾಗ ನಿಭಾಯಿಸುವ ಸಮರ್ಥ ವ್ಯಕ್ತಿ ನೀರಾ: ಶ್ವೇತಭವನ

ಪಿಟಿಐ
Published 24 ಫೆಬ್ರುವರಿ 2021, 6:29 IST
Last Updated 24 ಫೆಬ್ರುವರಿ 2021, 6:29 IST
ನೀರಾ ಟಂಡನ್‌
ನೀರಾ ಟಂಡನ್‌   

ವಾಷಿಂಗ್ಟನ್‌: ‘ಅಮೆರಿಕದ ಬಜೆಟ್ ‌ಅನ್ನು ಸಿದ್ಧಪಡಿಸಲು ಸಮರ್ಥರಾದ ಏಕೈಕ ವ್ಯಕ್ತಿ ಎಂದರೆ ನೀರಾ ಟಂಡನ್‌’ ಎಂಬುದು ಶ್ವೇತಭವನ ಸಿಬ್ಬಂದಿಯ ಪ್ರತಿಪಾದನೆ. ಇದೇ ಕಾರಣಕ್ಕೆ, ಬಜೆಟ್‌ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನಕ್ಕೆ ನೀರಾ ಅವರನಾಮನಿರ್ದೇಶನವನ್ನು ಶ್ವೇತಭವನ ಹಾಗೂ ಅಮೆರಿಕದಲ್ಲಿರುವ ಭಾರತೀಯರು ಬೆಂಬಲಿಸಿದ್ದಾರೆ.

‘ಬಜೆಟ್‌ ವಿಭಾಗವನ್ನು ಮುನ್ನಡೆಸಬಲ್ಲ ಏಕೈಕ ಅಭ್ಯರ್ಥಿ ನೀರಾ ಟಂಡನ್‌’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವುದು ನೀರಾ ಅವರ ಸಾಮರ್ಥ್ಯವನ್ನು ತೋರುತ್ತದೆ ಎಂದು ಎನ್ನಲಾಗುತ್ತದೆ.

ನೀರಾ ಅವರ ನಾಮನಿರ್ದೇಶನವನ್ನು ಸೆನೆಟ್‌ ಅನುಮೋದಿಸಬೇಕಿದೆ. ಇನ್ನೊಂದೆಡೆ, ಹಲವಾರು ರಿಪಬ್ಲಿಕನ್‌ ಸಂಸದರು, ನೀರಾ ಅವರ ನಾಮನಿರ್ದೇಶನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನೀರಾ ಅವರ ನಾಮನಿರ್ದೇಶನವನ್ನು ಅನುಮೋದಿಸುವ ನಿರ್ಣಯದ ವಿರುದ್ಧ ನಾನು ಮತ ಚಲಾಯಿಸುವೆ’ ಎಂದು ಒಹಿಯೊ ಪ್ರತಿನಿಧಿಸುವ ರಿಪಬ್ಲಿಕನ್‌ ಸಂಸದ ರಾಬ್‌ ಪೋರ್ಟ್‌ಮನ್‌ ಹೇಳಿದ್ದಾರೆ. ಡೆಮಾಕ್ರಟಿಕ್‌ ಸಂಸದ ಜೋ ಮನ್‌ಚಿನ್‌ ಸಹ ಇವರ ನಾಮನಿರ್ದೇಶನವನ್ನು ವಿರೋಧಿಸುವುದಾಗಿ ಹೇಳಿದ್ದಾರೆ.

ಸೆನೆಟ್‌ನಲ್ಲಿ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷದ ತಲಾ 50 ಸದಸ್ಯರಿದ್ದಾರೆ. ಡೆಮಾಕ್ರಟಿಕ್‌ ಸಂಸದ ಮನ್‌ಚಿನ್‌ ಅವರ ಹೇಳಿಕೆಯಿಂದಾಗಿ ಟಂಡನ್‌ ಅವರ ನಾಮನಿರ್ದೇಶನದ ಅನುಮೋದನೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ, ನೀರಾ ಅವರ ನಾಮನಿರ್ದೇಶನಕ್ಕೆ ಅನುಮೋದನೆ ಪಡೆಯುವ ವಿಶ್ವಾಸ ಇದೆ ಎಂದು ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.