ಸಾಂದರ್ಭಿಕ ಚಿತ್ರ
ಮಾಲೆ(ಮಾಲ್ದೀವ್ಸ್): ಉಭಯ ದೇಶಗಳ ನಡುವಿನ ಮಾತುಕತೆಯಂತೆ, ನಾಗರಿಕ ಸೇವಾ ಸಿಬ್ಬಂದಿ ಒಳಗೊಂಡ ಭಾರತದ ತಂಡವೊಂದು ಮಾಲ್ದೀವ್ಸ್ ತಲುಪಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಲ್ದೀವ್ಸ್‌ನಲ್ಲಿರುವ ಭಾರತೀಯ ಸೇನಾ ಸಿಬ್ಬಂದಿಯನ್ನು ವಾಪಸು ಕರೆಸಿಕೊಳ್ಳಲು ಮಾರ್ಚ್ 10ರ ಗಡುವು ಸಮೀಪಿಸುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.
ದ್ವೀಪ ರಾಷ್ಟ್ರದಲ್ಲಿರುವ ಮೂರು ವಿಮಾನಯಾನ ವೇದಿಕೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಸೇನೆಯ ಬದಲು ಈ ತಂಡಕ್ಕೆ ವಹಿಸಲಾಗುತ್ತದೆ.
‘ವಿಮಾನ ಕಾರ್ಯಾಚರಣೆ ಮತ್ತು ನಿರ್ವಹಣೆ ಹೊಣೆ ಹೊತ್ತ ತಂಡವು ಅಡ್ಡು ನಗರವನ್ನು ತಲುಪಿದೆ. ನಿರ್ವಹಣೆ ಜವಾಬ್ದಾರಿಯ ಹಸ್ತಾಂತರ/ಸ್ವೀಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ’ ಎಂಬ ರಕ್ಷಣಾ ಸಚಿವಾಲಯದ ಹೇಳಿಕೆ ಉಲ್ಲೇಖಿಸಿ ದಿ ಮಾಲ್ದೀವ್ಸ್ ಜರ್ನಲ್ ಡಾಟ್ ಕಾಮ್ ಎಂಬ ಸುದ್ದಿ ಪೋರ್ಟಲ್ ವರದಿ ಮಾಡಿದೆ.
ಮಾಲ್ದೀವ್ಸ್‌ನಲ್ಲಿರುವ ವಿಮಾನಯಾನ ವೇದಿಕೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಭಾರತೀಯ ಸೇನೆ ನೋಡಿಕೊಳ್ಳುತ್ತಿತ್ತು.
ಮೊಹಮ್ಮದ್ ಮುಯಿಜು ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೇ 10ರ ಒಳಗಾಗಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಫೆಬ್ರುವರಿ 2ರಂದು ದೆಹಲಿಯಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಸೇನೆ ಬದಲು ಭಾರತೀಯ ನಾಗರಿಕ ಸೇವೆ ಸಿಬ್ಬಂದಿಗೆ ಈ ಜವಾಬ್ದಾರಿ ನೀಡಬೇಕು. ಸೇನೆಯನ್ನು ವಾಪಸು ಕರೆಸಿಕೊಳ್ಳುವ ಮೊದಲ ಹಂತದ ಪ್ರಕ್ರಿಯೆ ಮಾರ್ಚ್ 10ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನಿರ್ಧರಿಸಲಾಗಿತ್ತು.
ಮಾಲ್ದೀವ್ಸ್‌ನಲ್ಲಿ ಭಾರತೀಯ ಸೇನೆಯ 88 ಸಿಬ್ಬಂದಿ ಇದ್ದು, ಭಾರತದ ನೆರವಿನಿಂದ ನಿರ್ಮಿಸಲಾಗಿರುವ ಮೂರು ವಿಮಾನಯಾನ ವೇದಿಕೆಗಳ ನಿರ್ವಹಣೆ ಮಾಡುತ್ತಿದ್ದಾರೆ. ಎರಡು ಹೆಲಿಕಾಪ್ಟರ್ ಹಾಗೂ ಒಂದು ಡಾರ್ನಿಯರ್ ವಿಮಾನ ಇದ್ದು, ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯ ಹಾಗೂ ವೈದ್ಯಕೀಯ ಸೇವೆ ಒದಗಿಸಲು ಇವುಗಳನ್ನು ನಿಯೋಜನೆ ಮಾಡಲಾಗಿದೆ.
ಸೇನೆ ಬದಲಾಗಿ, ಇವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಭಾರತೀಯ ನಾಗರಿಕ ಸೇವೆ ಸಿಬ್ಬಂದಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.