
ನ್ಯೂಯಾರ್ಕ್‌ನಲ್ಲಿ ನಡೆದ ಪ್ರವಾಸ ಮತ್ತು ಸಾಹಸ ಪ್ರದರ್ಶನ–2026ರಲ್ಲಿ ಇಂಡಿಯಾ ಪೆವಿಲಿಯನ್ ಅನ್ನು ಭಾರತದ ರಾಯಭಾರಿ ಬಿನಯ ಪ್ರಧಾನ್ ಉದ್ಘಾಟಿಸಿದರು
ಪಿಟಿಐ ಚಿತ್ರ
ನ್ಯೂಯಾರ್ಕ್: ‘ಸಿರಿವಂತ ಪರಂಪರೆಯನ್ನು ಕಣ್ತುಂಬಿಕೊಳ್ಳಲಿಕ್ಕಾಗಿಯೇ ದೇಶಕ್ಕೆ ಭೇಟಿ ನೀಡಿ’ ಎಂದು ಅಮೆರಿಕದ ಪ್ರವಾಸಿಗರಿಗೆ ಭಾರತೀಯ ರಾಯಭಾರ ಕಚೇರಿಯು ಆಹ್ವಾನ ನೀಡಿದೆ.
ನ್ಯೂಯಾರ್ಕ್‌ನಲ್ಲಿ ಜ.24, 25ರಂದು ನಡೆದ ಪ್ರವಾಸ ಮತ್ತು ಸಾಹಸ ಪ್ರದರ್ಶನ–2026ರಲ್ಲಿ ಭಾಗಿಯಾಗಿದ್ದ ರಾಯಭಾರ ಕಚೇರಿಯು, ‘ಭಾರತದಲ್ಲಿನ ಪಾಕಶಾಲೆಗಳ ಅನುಭವಗಳನ್ನು ಪಡೆದುಕೊಳ್ಳಲು ಬನ್ನಿ’ ಎಂದು ಆಮಂತ್ರಿಸಿದೆ.
ಜೇಕಬ್ ಜಾವಿಟ್ಸ್ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಪ್ರಮುಖ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ತಾಣಗಳನ್ನು ಪ್ರದರ್ಶಿಸಲಾಗಿತ್ತು. ಜೊತೆಗೆ ಹತ್ತು ಸಾವಿರ ಪ್ರವಾಸಿಗರಿಗೆ ಈ ವರ್ಷ ಭಾರತ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬುದನ್ನು ಪ್ರಮುಖವಾಗಿ ಬಿಂಬಿಸಲಾಗಿತ್ತು.
ಪ್ರದರ್ಶನದ ಪ್ರಮುಖ ಸ್ಥಳದಲ್ಲೇ ‘ಇಂಡಿಯಾ ಪೆವಿಲಿಯನ್’ಗೆ ಅವಕಾಶ ನೀಡಲಾಗಿತ್ತು. ನ್ಯೂಯಾರ್ಕ್‌ನಲ್ಲಿರುವ ಭಾರತದ ರಾಯಭಾರಿ ಬಿನಯ ಪ್ರಧಾನ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
‘ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಲ್ಲಿ ಶೇ 20ರಷ್ಟು ಮಂದಿ ಅಮೆರಿಕದವರು. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನಗಳತ್ತ ಗಮನ ಹರಿಸಲಾಗಿದೆ. ಇದರ ಭಾಗವಾಗಿಯೇ ಕೆಲವು ಪ್ರವಾಸೋದ್ಯಮ ಕಂಪನಿಗಳು ನ್ಯೂಯಾರ್ಕ್‌ನಲ್ಲಿ ಕಚೇರಿ ಆರಂಭಿಸಿವೆ’ ಎಂದು ಹೇಳಿದರು.
‘ಅಮೆರಿಕನ್ನರನ್ನು ಭಾರತದ ಪ್ರವಾಸೋದ್ಯಮದ ಮುಖ್ಯವಾಹಿನಿಗೆ ಕೊಂಡೊಯ್ಯುವ ಕೆಲಸವನ್ನು ರಾಯಭಾರ ಕಚೇರಿ ಮಾಡಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.