ADVERTISEMENT

ಭಾರತದಿಂದ ಮಹಿಳೆಯರ ಕಳ್ಳಸಾಗಣೆ: ಸಿಂಗಪುರದ ವ್ಯಕ್ತಿಗೆ 41 ತಿಂಗಳು ಜೈಲು

ಪಿಟಿಐ
Published 20 ಏಪ್ರಿಲ್ 2022, 3:11 IST
Last Updated 20 ಏಪ್ರಿಲ್ 2022, 3:11 IST
   

ಸಿಂಗಪುರ: ಭಾರತದಿಂದ ಮೂವರು ಮಹಿಳಾ ನೃತ್ಯಗಾರರನ್ನು ಕಳ್ಳಸಾಗಣೆ ಮಾಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸಿಂಗಪುರದ ಮನರಂಜನಾ ಕ್ಲಬ್‌ನ ಭಾರತೀಯ ನಿರ್ವಾಹಕನಿಗೆ 41 ತಿಂಗಳ ಜೈಲು ಶಿಕ್ಷೆ ಮತ್ತು ಸಿಂಗಪುರ ಡಾಲರ್ 27,365 (ಸುಮಾರು 15 ಲಕ್ಷ) ದಂಡ ವಿಧಿಸಲಾಗಿದೆ.

ರಕ್ಷಿಸಲ್ಪಟ್ಟ ಎಲ್ಲಾ ಮೂವರು ಮಹಿಳೆಯರು ನಂತರ ಭಾರತಕ್ಕೆ ಮರಳಿದ್ದಾರೆ. ಅವರಲ್ಲಿ ಇಬ್ಬರ ಮೇಲೆ ಬಾಲಸುಬ್ರಮಮಣಿಯನ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

6 ತಿಂಗಳ ಒಪ್ಪಂದದ ಮೇಲೆ 2016 ರಲ್ಲಿ ಅವರನ್ನು ಕರೆದೊಯ್ದಿದ್ದ ಸುಬ್ರಮಣಿಯನ್ ಅವರಿಗೆ ಯಾವುದೇ ಸಂಬಳವನ್ನು ನೀಡಿಲ್ಲ ಎಂದು ಸಚಿವಾಲಯ ತಿಳಿಸಿರುವುದಾಗಿ ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.

ADVERTISEMENT

ಅವರ ಪಾಸ್‌ಪೋರ್ಟ್‌ಗಳು, ಕೆಲಸದ ಪರವಾನಗಿಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದ ಸುಬ್ರಮಣಿಯನ್, ತನ್ನ ಅನುಮತಿಯಿಲ್ಲದೆ ಭಾರತಕ್ಕೆ ಹಿಂದಿರುಗಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ಅದು ಹೇಳಿದೆ.

ತನಿಖಾ ಅಧಿಕಾರಿಗಳು ಮಹಿಳೆಯರ ಯೋಗಕ್ಷೇಮ ಪರಿಶೀಲಿಸಲು ನಿಯಮಿತವಾಗಿ ಭೇಟಿ ನೀಡುತ್ತಾರೆ ಮತ್ತು ಅವರಿಗಾಗಿ ವೃತ್ತಿಪರ ಸಲಹೆ ಸೇವೆಗಳನ್ನು ಒದಗಿಸುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. ಭಾರತಕ್ಕೆ ಹಿಂದಿರುಗಿರುವ ಅವರು ತಾತ್ಕಾಲಿಕ ಉದ್ಯೋಗ ಯೋಜನೆಯಡಿ ಉದ್ಯೋಗವನ್ನೂ ಪಡೆದಿದ್ದಾರೆ.

ಬಾಲಸುಬ್ರಮಣಿಯನ್ ಅವರ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ನಾಲ್ಕು ಆರೋಪಗಳು ಕೇಳಿಬಂದಿದ್ದು, ಒಂದರಲ್ಲಿ ಖುಲಾಸೆಗೊಂಡಿದ್ದಾರೆ. ಕ್ಲಬ್‌ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಸುಬ್ರಮಣಿಯನ್ ಬಣ್ಣ ಬಯಲಾಗಿದೆ.

ಮೂವರು ಮಹಿಳೆಯರು ಅಲ್ಪಸ್ವಲ್ಪ ಓದಿಕೊಂಡಿದ್ದು, ಅವರಿಗೆ ಸಿಂಗಪುರದ ಪರಿಚಯ ಇರಲಿಲ್ಲ. ಇದರಲ್ಲಿ ಇಬ್ಬರು ಹಿಂದೆಂದೂ ಸಿಂಗಪುರಕ್ಕೆ ಭೇಟಿ ನೀಡಿರಲಿಲ್ಲ, ಆದರೆ, ಇನ್ನೊಬ್ಬ ಮಹಿಳೆ ಕ್ಲಬ್‌ನಲ್ಲಿ ಉದ್ಯೋಗಿಯಾಗುವ ಒಂದು ವಾರದ ಮೊದಲಿನಿಂದಲೂ ಸಿಂಗಪುರದಲ್ಲಿಯೇ ಇದ್ದರು.

ಬಾಲಸುಬ್ರಮಣಿಯನ್ ಅವರು ಭಾರತದಲ್ಲಿನ ಹಳ್ಳಿಗಳಿಂದ ಮಹಿಳೆಯರನ್ನು ಕರೆ ತಂದು ಬಲವಂತವಾಗಿ ಇರಿಸಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

'ಕ್ಲಬ್ ಒಂದು ದೊಡ್ಡ ಜೈಲಿನಂತೆ. ಒಮ್ಮೆ ನೀವು ಅಲ್ಲಿ ಸಿಕ್ಕಿಬಿದ್ದರೆ, ಮಾಲೀಕ ನಿಮ್ಮನ್ನು ಬಿಡುಗಡೆ ಮಾಡುವವರೆಗೂ ಹೊರಗೆ ಬರಲು ಸಾಧ್ಯವಿಲ್ಲ. ಮಾಲೀಕ ಕರೆದಲ್ಲಿಗೆ ಹೋಗಬೇಕು. ನೀವು ಅವರಿಗೆ ಇಷ್ಟವಾದರೆ ಮಾತ್ರ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಲ್ಲದಿದ್ದರೆ, ಅವರು ನಿಮ್ಮನ್ನು ಹಿಂಸಿಸುತ್ತಾರೆ ಮತ್ತು ನಿಮ್ಮನ್ನು ಸಂಪೂರ್ಣ ಶಕ್ತಿಹೀನರನ್ನಾಗಿಸುತ್ತಾರೆ’ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.

ಮಹಿಳೆಯರು ಕ್ಲಬ್‌ ಮೇಲಿನ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಬಾಲಸುಬ್ರಮಣಿಯನ್ ಕೂಡ ತಮ್ಮ ಕೆಲಸದ ಅವಧಿಯಲ್ಲಿ ಕ್ಲಬ್‌ನಲ್ಲೇ ಇರುತ್ತಿದ್ದರು. ನರ್ತಕಿಯರಿಗೆ ನಿರಂತರ ಸಂಪರ್ಕದಲ್ಲಿರಲು ವರ್ಕ್ ಫೋನ್ ನೀಡಲಾಗಿತ್ತು.ಕ್ಲಬ್‌ಗೆ ಬರುವ ಗ್ರಾಹಕರಿಗೆ ಅವರೊಂದಿಗೆ ನೃತ್ಯ ಮಾಡಲು ಮತ್ತು ಹಣ ನೀಡಿ ಅವರನ್ನು ಸ್ಪರ್ಶಿಸಲು ಅವಕಾಶ ನೀಡಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.