ಸಿಂಗಪುರ: ಭಾರತ ಮೂಲದ, ಸಿಂಗಪುರ ಸಂಜಾತ ಹಾಗೂ ಮಾಜಿ ಸಚಿವ ಥರ್ಮನ್ ಷಣ್ಮುಗರತ್ನಂ ಮತ್ತು ಚೀನಾ ಮೂಲದ ಇಬ್ಬರು ಸರ್ಕಾರಿ ಕಂಪನಿಗಳ ಮಾಜಿ ಅಧಿಕಾರಿಗಳು ಸೆಪ್ಟೆಂಬರ್ 1 ರಂದು ನಡೆಯಲಿರುವ ಸಿಂಗಪುರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದಿರುವುದಾಗಿ ಶುಕ್ರವಾರ ಪ್ರಕಟಿಸಲಾಗಿದೆ.
ಗುರುವಾರದ ಗಡುವಿನೊಳಗೆ ಅರ್ಹತಾ ಪ್ರಮಾಣಪತ್ರಕ್ಕಾಗಿ ಒಟ್ಟು ಆರು ಅರ್ಜಿಗಳನ್ನು ಅಧ್ಯಕ್ಷೀಯ ಚುನಾವಣಾ ಸಮಿತಿ (ಪಿಇಸಿ) ಸ್ವೀಕರಿಸಿದೆ ಎಂದು ಚುನಾವಣೆಗಳ ಇಲಾಖೆ (ಇಎಲ್‌ಡಿ) ತಿಳಿಸಿದೆ.
ಒಬ್ಬರಿಗಿಂತ ಹೆಚ್ಚು ಮಂದಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದರೆ, ಸೆಪ್ಟೆಂಬರ್ 1ರಂದು ಅಧ್ಯಕ್ಷೀಯ ಚುನಾವಣೆ ನಡೆಸುವುದಾಗಿ ಸಿಂಗಪುರ ಈ ಹಿಂದೆ ಪ್ರಕಟಿಸಿತ್ತು. ಹಾಲಿ ಅಧ್ಯಕ್ಷೆ ಹಲೀಮಾ ಯಾಕೋಬ್ ಅವರ ಆರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ 13ರಂದು ಕೊನೆಗೊಳ್ಳಲಿದೆ.
66 ವರ್ಷದ ಥರ್ಮನ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಳೆದ ತಿಂಗಳು ಸಾರ್ವಜನಿಕ ಮತ್ತು ರಾಜಕೀಯ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಈ ಮೊದಲು ಅವರು ಸಿಂಗಪುರ ಸರ್ಕಾರದಲ್ಲಿ ಮೂರು ವರ್ಷ ಸಚಿವರಾಗಿ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.