ADVERTISEMENT

ಸಿಂಧ್ ಸ್ವಾತಂತ್ರ್ಯ ಹೋರಾಟದಲ್ಲಿ ನರೇಂದ್ರ ಮೋದಿ ಭಿತ್ತಿ ಚಿತ್ರ ಪ್ರದರ್ಶನ

ಏಜೆನ್ಸೀಸ್
Published 18 ಜನವರಿ 2021, 4:27 IST
Last Updated 18 ಜನವರಿ 2021, 4:27 IST
ಭಾರತ ಪ್ರಧಾನಿ ನರೇಂದ್ರ ಮೋದಿ
ಭಾರತ ಪ್ರಧಾನಿ ನರೇಂದ್ರ ಮೋದಿ   

ಸನ್ನ (ಪಾಕಿಸ್ತಾನ): ಆಧುನಿಕ ಸಿಂಧಿ ರಾಷ್ಟ್ರೀಯತೆಯ ಸ್ಥಾಪಕ ಪಿತಾಮಹರಲ್ಲಿ ಒಬ್ಬರಾದ ಜಿಎಂ ಸೈಯದ್ ಅವರ 117ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಬೃಹತ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಿತ್ತಿಚಿತ್ರವನ್ನು ಪ್ರದರ್ಶಿಸಲಾಗಿದೆ.

ಸೈಯದ್ ಅವರ ಹುಟ್ಟೂರಾದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸನ್ನದಲ್ಲಿ ಭಾನುವಾರ ಏರ್ಪಡಿಸಲಾದ ಬೃಹತ್ ರ‍್ಯಾಲಿಯಲ್ಲಿ 'ಸಿಂಧುದೇಶ'ದ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖರ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಅಲ್ಲದೆ ಪರ ಘೋಷಣೆಗಳನ್ನು ಕೂಗಿದರು.

ಸಿಂಧೂ ಕಣಿವೆ ನಾಗರಿಕತೆ ಮತ್ತು ವೈದಿಕ ಧರ್ಮದ ನೆಲೆಯಾಗಿರುವ ಸಿಂಧ್ ಪ್ರಾಂತ್ಯವನ್ನು ಬ್ರಿಟಿಷ್ ವಸಾಹತುಶಾಹಿತ್ವವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿತ್ತು. ಬಳಿಕ 1947ರಲ್ಲಿ ಇಸ್ಲಾಮಿಕ್ ದೇಶವಾದ ಪಾಕಿಸ್ತಾನಕ್ಕೆ ಹಸ್ತಾಂತರಿಸಿತ್ತು.

ADVERTISEMENT

ಸಿಂಧ್ ಇತಿಹಾಸ ಹಾಗೂ ಸಂಸ್ಕೃತಿಯ ಮೇಲಿನ ಕ್ರೂರ ದಾಳಿಯ ಹೊರತಾಗಿಯೂ ಸಿಂಧ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಲ್ಲದೆ ತನ್ನದೇ ಆದ ಪ್ರತ್ಯೇಕ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡಿದೆ ಎಂದು ಜೇಯ್ ಸಿಂಧ್ ಮುತಹಿದಾ ಮಹಜ್ ಮುಖ್ಯಸ್ಥ ಶಾಫಿ ಮುಹಮ್ಮದ್ ಬರ್ಫತ್ ಅಭಿಪ್ರಾಯಪಟ್ಟಿದ್ದಾರೆ.

ಸಿಂಧ್‌ನಲ್ಲಿರುವ ಹಲವಾರು ರಾಷ್ಟ್ರೀಯವಾದಿ ಪಕ್ಷಗಳು ಪಾಕಿಸ್ತಾನ ಮುಕ್ತ ಸಿಂಧ್ ರಾಷ್ಟ್ರಕ್ಕಾಗಿ ಪ್ರತಿಪಾದಿಸುತ್ತಿವೆ. ಅವರು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಎತ್ತಿ ಹಿಡಿದಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮಾನವ ಸಂಪನ್ಮೂಲಗಳ ಶೋಷಣೆ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ.

'ಸಿಂಧುದೇಶ' ಸಿಂಧ್‌ಗಳಿಗೆ ಪ್ರತ್ಯೇಕ ತಾಯ್ನಾಡಿನ ಬೇಡಿಕೆಯೊಂದಿಗೆ ಜಿಎಂ ಸೈಯದ್ ಮತ್ತು ಪಿರ್ ಅಲಿ ಮೊಹಮ್ಮದ್ ರಾಶ್ದಿ 1967ರಲ್ಲಿ ಹೋರಾಟವನ್ನು ಆರಂಭಿಸಿದ್ದರು. ಕಳೆದ ಕೆಲವು ದಶಕಗಳಲ್ಲಿ ಪಾಕಿಸ್ತಾನದ ಮಿಲಿಟರಿಯಿಂದ ಶೋಷಣೆಗೆ ಒಳಗಾಗಿದ್ದು, ಅನೇಕಹೋರಾಟಗಾರರುಪ್ರಾಣ ತ್ಯಾಗ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.