ADVERTISEMENT

ಕ್ವಾರಂಟೈನ್‌ ಉಲ್ಲಂಘನೆ: ಭಾರತೀಯ ವ್ಯಕ್ತಿಗೆ ₹ 3 ಲಕ್ಷ ದಂಡ, 5 ತಿಂಗಳು ಜೈಲು

ಏಜೆನ್ಸೀಸ್
Published 13 ಆಗಸ್ಟ್ 2020, 13:46 IST
Last Updated 13 ಆಗಸ್ಟ್ 2020, 13:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೌಲಾಲಂಪುರ: ಭಾರತೀಯವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್‌ ಉಲ್ಲಂಘಿಸಿದ್ದಕ್ಕೆ ಮಲೇಷಿಯಾ ನ್ಯಾಯಾಲಯ ಸುಮಾರು ₹ 3 ಲಕ್ಷದಂಡ ಹಾಗೂ 5 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಜೈಲು ಶಿಕ್ಷೆಗೆ ಗುರಿಯಾಗಿರುವ 57 ವರ್ಷದ ವ್ಯಕ್ತಿ ಮಲೇಷಿಯಾದಲ್ಲಿ ನೆಲೆಸಿದ್ದಾರೆ. ಸ್ಥಳೀಯವಾಗಿ ರೆಸ್ಟೋರೆಂಟ್‌ ನಡೆಸುತ್ತಿರುವಅವರು ಕಳೆದ ಜುಲೈ ತಿಂಗಳಲ್ಲಿ ಭಾರತದಿಂದ ಮರಳಿದ್ದರು. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಅವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು.

ಆದರೆ ಆ ವ್ಯಕ್ತಿ ಕ್ವಾರಂಟೈನ್‌ ಉಲ್ಲಂಘನೆ ಮಾಡಿ ಪದೇ ಪದೇರೆಸ್ಟೋರೆಂಟ್‌ಗೆ ಬಂದು ಹೋಗಿದ್ದರು. ಮತ್ತೆ ಎರಡನೇ ಬಾರಿಗೆ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವವರು ಸೇರಿದಂತೆ ಅವರ ಮನೆಯ 12 ಜನರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ADVERTISEMENT

ಸದ್ಯ ಸೋಂಕಿತ ಆವ್ಯಕ್ತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಆರೋಗ್ಯ ಇಲಾಖೆ ಆ ವ್ಯಕ್ತಿಯ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಿತ್ತು. ಇದರ ಅನ್ವಯ ಆರೋಪಿಯನ್ನು ಆಸ್ಫತ್ರೆಯಲ್ಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸ್ಥಳೀಯ ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಆರೋಪಿ ಕ್ವಾರಂಟೈನ್‌ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ನ್ಯಾಯಾಲಯ ದಂಡ ಮತ್ತು 5 ತಿಂಗಳ ಶಿಕ್ಷೆ ವಿಧಿಸಿದೆ.

ಕೊರೊನಾ ಸೋಂಕು ತಡೆಯಲು ಮಲೇಷಿಯಾ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ವಿದೇಶಗಳಿಂದ ಬರುವವರಿಗೆ ಕಡ್ಡಾಯ ಹೋಂ ಕ್ವಾರಂಟೈನ್‌ ಮಾಡಲಾಗುತ್ತಿದೆ.ಇತ್ತೀಚಿಗೆ ಮಲೇಷಿಯಾದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.