ADVERTISEMENT

ಸುದರ್ಶನ್‌ಗೆ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ

ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ಮರಳುಶಿಲ್ಪ ಸ್ಪರ್ಧೆ

ಪಿಟಿಐ
Published 29 ಜುಲೈ 2019, 6:15 IST
Last Updated 29 ಜುಲೈ 2019, 6:15 IST
   

ನ್ಯೂಯಾರ್ಕ್: ಬಾಸ್ಟನ್‌ ನಗರದ ಮೆಸ್ಸಾಚ್ಯುಸೆಟ್ಸ್‌ನ ರೆವೆರೆ ಕಡಲತೀರದಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ ಮರಳುಶಿಲ್ಪ ಸ್ಪರ್ಧೆಯಲ್ಲಿ ಭಾರತದ ಖ್ಯಾತ ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರಿಗೆ ‘ಪೀಪಲ್ಸ್ ಚಾಯ್ಸ್‌’ ಪ್ರಶಸ್ತಿ ಲಭಿಸಿದೆ.

ಈ ಸ್ಪರ್ಧೆಯಲ್ಲಿ ಜಗತ್ತಿನ ಬೇರೆಬೇರೆ ಭಾಗಗಳಿಂದ ಒಟ್ಟು 15 ಪ್ರಸಿದ್ಧ ಮರಳುಶಿಲ್ಪ ಕಲಾವಿದರು ಭಾಗವಹಿಸಿದ್ದರು. ‘ಪ್ಲಾಸ್ಟಿಕ್ ಮಾಲಿನ್ಯ ತಡೆಯಿರಿ; ನಮ್ಮ ಕಡಲನ್ನು ರಕ್ಷಿಸಿ’ ಅನ್ನುವ ಶೀರ್ಷಿಕೆಯಡಿ ಸುದರ್ಶನ್, ರಚಿಸಿದ ಮರಳುಶಿಲ್ಪ ಅಮೆರಿಕ ಜನರ ಅಪಾರ ಮೆಚ್ಚುಗೆ ಭಾಜನವಾಗಿದೆ. ಸುದರ್ಶನ್ ಈ ಸ್ಪರ್ಧೆಯಲ್ಲಿ ಭಾರತ ಮತ್ತು ಏಷ್ಯಾ ಖಂಡದ ಏಕೈಕ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.

ADVERTISEMENT

‘ಅಮೆರಿಕದಲ್ಲಿ ದೊರೆತ ಅತಿದೊಡ್ಡ ಪ್ರಶಸ್ತಿ ಇದಾಗಿದ್ದು, ಈ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಈ ಪ್ರಶಸ್ತಿ ಭಾರತಕ್ಕೆ ಸಲ್ಲಬೇಕು. ಕಡಲತೀರದಲ್ಲಿ ಉಂಟಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಭಾರತವೂ ಅಪಾರವಾಗಿ ಶ್ರಮಿಸುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ತುರ್ತಿನ ಕೆಲಸ. ನನ್ನ ಮರಳುಶಿಲ್ಪ ಜನಜಾಗೃತಿಗಾಗಿ ರಚಿಸಿದ್ದು, ಯಾರು ಈ ಶಿಲ್ಪಕ್ಕೆ ಮತ ಚಲಾಯಿಸಿದ್ದಾರೋ ಅವರೆಲ್ಲರೂ ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಮತ ಚಲಾಯಿಸಿದಂತೆ’ ಎಂದು ಸುದರ್ಶನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮನುಷ್ಯನ ಬಾಯಿಯಲ್ಲಿರುವ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚಪ್ಪಲಿ, ಪ್ಲಾಸ್ಟಿಕ್ ನೀರಿನ ಬಾಟಲಿ, ಗಾಜು ಇತ್ಯಾದಿ ತುಂಬಿದ್ದು, ಅದರ ಮೇಲೆ ಪ್ಲಾಸ್ಟಿಕ್ ಬ್ಯಾಗ್ ಹೊದ್ದಿರುವ ಆಮೆಯ ಚಿತ್ರವನ್ನು ಸುದರ್ಶನ ತಮ್ಮ ಮರಳುಶಿಲ್ಪದಲ್ಲಿ ಚಿತ್ರಿಸಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯ ಕಡಲಷ್ಟೇ ಅಲ್ಲ ಅದರೊಳಗಿನ ಜೀವಿಗಳನ್ನು ಮತ್ತು ಸಮುದ್ರಾಹಾರ ಸೇವಿಸುವ ಮನುಷ್ಯರಿಗೂ ಹೇಗೆ ವಿಷವಾಗುತ್ತಿದೆ ಎನ್ನುವುದನ್ನು ಈ ಶಿಲ್ಪ ಅರ್ಥೈಸುತ್ತದೆ.

ಅಪಾರ ಕರತಾಡನದ ನಡುವೆ ರೆವೆರೆ ಬೀಚ್ ಸಹಭಾಗಿತ್ವದ ಬೋರ್ಡ್ ಸದಸ್ಯ ಆಡ್ರಿಯೆನ್ ಸಾಕೊ-ಮ್ಯಾಗೈರ್, ಸುದರ್ಶನ್ ಪಟ್ನಾಯಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಸಂದೀಪ್ ಚಕ್ರವರ್ತಿ ಮತ್ತು ಬಾಸ್ಟನ್‌
ನಲ್ಲಿರುವ ಭಾರತೀಯರು ಸುದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.