ADVERTISEMENT

ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯ ಕೊಲೆ; ಜೊತೆಯಲ್ಲೇ ವಾಸವಿದ್ದ ಆರೋಪಿ ಬಂಧನ

ರಾಯಿಟರ್ಸ್
Published 7 ಡಿಸೆಂಬರ್ 2024, 2:53 IST
Last Updated 7 ಡಿಸೆಂಬರ್ 2024, 2:53 IST
   

ಒಟ್ಟಾವ: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನೆಲೆಸಿದ್ದ ಭಾರತ ಮೂಲದ 22 ವರ್ಷದ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅವರೊಂದಿಗೆ ಮನೆಯಲ್ಲಿ ವಾಸವಿದ್ದ ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲ್ಯಾಂಬ್ಟನ್‌ ಕಾಲೇಜಿನಲ್ಲಿ 'ಬಿಸಿನೆಸ್ ಮ್ಯಾನೇಜ್‌ಮೆಂಟ್‌' ವ್ಯಾಸಂಗ ಮಾಡುತ್ತಿದ್ದ ಗುರಾಸಿನ್‌ ಸಿಂಗ್‌ ಮೃತ ವಿದ್ಯಾರ್ಥಿ. ಸರ್ನಿಯಾ ನಗರದ 194 ಕ್ವೀನ್‌ ಸ್ಟೀಟ್‌ನಲ್ಲಿ ನೆಲೆಸಿದ್ದ ಅವರು ಭಾನುವಾರ ಇರಿತಕ್ಕೊಳಗಾಗಿದ್ದರು. ಈ ಸಂಬಂಧ ತುರ್ತು ಕರೆ ಬಂದಿತ್ತು ಎಂದು ಪೊಲೀಸರು ಪ್ರಕಟಿಸಿದ್ದಾರೆ.

ಸಿಂಗ್‌ ಅವರೊಂದಿಗೆ 36 ವರ್ಷದ ಆರೋಪಿ ಕ್ರಾಸ್ಲಿ ಹಂಟರ್‌ ಎಂಬವರು ವಾಸವಾಗಿದ್ದರು. ಅಡುಗೆ ಮನೆಯಲ್ಲಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಆರೋಪಿಯು, ಸಿಂಗ್‌ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

'ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣವು ಜನಾಂಗೀಯ ಪ್ರೇರಿತ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

'ಆರೋಪಿಯನ್ನು ಬಂಧಿಸಲಾಗಿದೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುವುದು. ಕೊಲೆಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಘಟನೆ ನಡೆದ ಸ್ಥಳದಲ್ಲಿ ದೊರಕುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ' ಎಂದು ಸರ್ನಿಯಾ ಪೊಲೀಸ್‌ ಮುಖ್ಯಸ್ಥ ಡೆರೆಕ್‌ ಡೇವಿಸ್‌ ಹೇಳಿದ್ದಾರೆ.

ಸಿಂಗ್‌ ಹತ್ಯೆಗೆ ಸಂತಾಪ ಸೂಚಿಸಿ, ಲ್ಯಾಂಬ್ಟನ್‌ ಕಾಲೇಜು ಹೇಳಿಕೆ ಬಿಡುಗಡೆ ಮಾಡಿದೆ.

'ಮೃತ ವಿದ್ಯಾರ್ಥಿಯು ನಮ್ಮೆಲ್ಲರ ಹೃದಯದಲ್ಲಿದ್ದಾರೆ. ನಾವು ಅವರನ್ನು ಕಳೆದುಕೊಂಡಿರುವ ದುರಂತವು ತುಂಬಲಾರದ ನಷ್ಟ ಉಂಟುಮಾಡಿದೆ. ಗುರಾಸಿನ್‌ ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಸಂತಾಪ ಸೂಚಿಸುತ್ತೇವೆ' ಎಂದು ತಿಳಿಸಲಾಗಿದೆ.

‌ಏತನ್ಮಧ್ಯೆ, ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.