
ಮೊಹಮ್ಮದ್ ಹುಸೇನ್
Credit: X/@IndiaWarZone
ಮೊರ್ಬಿ: ರಷ್ಯಾ ಸೇನೆಗೆ ಸೇರಿದ್ದ ಗುಜರಾತ್‌ನ ಯುವಕನೊಬ್ಬ ಉಕ್ರೇನ್ ಪಡೆಗಳ ಮುಂದೆ ಶರಣಾಗಿದ್ದಾನೆ.
ಇಲ್ಲಿನ ಮಾಜೋಟಿ ಸಾಹಿಲ್ ಮೊಹಮ್ಮದ್ ಹುಸೇನ್ (22) ರಷ್ಯಾದ ಪರ ಯುದ್ಧದಲ್ಲಿ ಭಾಗವಹಿಸಿದ್ದ ಎಂದು ಗುಜರಾತ್ ಪೊಲೀಸರು ಬುಧವಾರ ತಿಳಿಸಿದ್ದಾರೆ.
‘ಶಿಕ್ಷಣ ಪಡೆಯುವ ಸಲುವಾಗಿ ಹುಸೇನ್ ಕೆಲವು ವರ್ಷಗಳ ಹಿಂದೆ ರಷ್ಯಾಗೆ ತೆರಳಿದ್ದ. ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈತ ಪಾಸ್‌ಪೋರ್ಟ್, ವೀಸಾ ಮತ್ತು ಅಲ್ಲಿನ ಸಂಪರ್ಕಗಳನ್ನು ಹೇಗೆ ಪಡೆದಿದ್ದ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಹುಸೇನ್ ಕುಟುಂಬದ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ರಷ್ಯಾ ಸೇನಾಪಡೆ ಪರವಾಗಿ ಯುದ್ಧದಲ್ಲಿ ಭಾಗಿಯಾಗಿದ್ದ ಭಾರತೀಯ ಪ್ರಜೆಯೊಬ್ಬ ಶರಣಾಗಿದ್ದಾನೆ’ ಎಂದು ಉಕ್ರೇನ್ ಸೇನೆಯು ತಿಳಿಸಿದೆ.
* ಡ್ರಗ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹುಸೇನ್
* ಶಿಕ್ಷೆ ವಿನಾಯಿತಿ ಆಮಿಷ ತೋರಿ, ಒಪ್ಪಂದ
* ವಿಡಿಯೊ ಬಿಡುಗಡೆ ಮಾಡಿದ ಉಕ್ರೇನ್
‘ರಷ್ಯಾದಲ್ಲಿ ನನಗೆ ಏಳು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಹೆಚ್ಚುವರಿ ಶಿಕ್ಷೆಯಿಂದ ವಿನಾಯಿತಿ ಪಡೆಯಲು ಒಪ್ಪಂದವೊಂದಕ್ಕೆ ಸಹಿ ಮಾಡಿಸಿಕೊಂಡಿದ್ದರು. ನನಗೆ ಜೈಲಿನಲ್ಲಿರಲು ಇಷ್ಟವಿರಲಿಲ್ಲ, ಅದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೆ. ಆದರೆ, ಈಗ ಇದರಿಂದ ಹೊರಬರಬೇಕು ಅನಿಸುತ್ತಿದೆ’ ಎಂದು ಹುಸೇನ್ ಹೇಳಿಕೆ ನೀಡಿರುವ ವಿಡಿಯೊವನ್ನು ಉಕ್ರೇನ್ ಸೇನೆ ಬಿಡುಗಡೆಗೊಳಿಸಿದೆ.
16 ದಿನಗಳ ತರಬೇತಿಯ ಬಳಿಕ ಅಕ್ಟೋಬರ್ 1ರಂದು ಕಾರ್ಯಾಚರಣೆಯಲ್ಲಿ ಭಾಗವಹಿಸಲು ಹುಸೇನ್‌ನನ್ನು ಕಳುಹಿಸಲಾಗಿತ್ತು. ಯುದ್ಧದಲ್ಲಿ ಹುಸೇನ್ ತನ್ನ ಕಮಾಂಡರ್‌ನೊಂದಿಗೆ ಉಕ್ರೇನ್‌ಗೆ ಶರಣಾಗಿದ್ದ.
‘ಉಕ್ರೇನ್ ಸೇನೆಯನ್ನು ನೋಡಿದ ನಾನು ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗಿದ್ದೇನೆ. ನನಗೆ ರಷ್ಯಾಕ್ಕೆ ಮರಳುವ ಇಚ್ಛೆ ಇಲ್ಲ. ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದೇನೆ’ ಎಂದು ಹುಸೇನ್ ಹೇಳಿದ್ದಾನೆ.
ವಿದ್ಯಾರ್ಥಿ ಮತ್ತು ವಾಣಿಜ್ಯ ವೀಸಾ ಪಡೆದು ರಷ್ಯಾಕ್ಕೆ ತೆರಳಿರುವ ಹಲವಾರು ಭಾರತೀಯರನ್ನು ಬಲವಂತವಾಗಿ ಅಲ್ಲಿನ ಸೇನೆಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಕೆಲವು ವರದಿಗಳು ತಿಳಿಸಿವೆ.
‘ಪ್ರಸ್ತುತ ರಷ್ಯಾ ಸೇನೆಯಲ್ಲಿರುವ 27 ಭಾರತೀಯರನ್ನು ಬಿಡುಗಡೆಗೊಳಿಸಿ, ಸ್ವದೇಶಕ್ಕೆ ಕಳುಹಿಸುವಂತೆ ರಷ್ಯಾಕ್ಕೆ ಆಗ್ರಹಿಸಲಾಗಿದೆ’ ಎಂದು ವಿದೇಶಾಂಗ ಇಲಾಖೆ ಕಳೆದ ತಿಂಗಳು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.