ADVERTISEMENT

ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನದ ಕಡೆಗೆ ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಪಿಟಿಐ
Published 11 ಜೂನ್ 2023, 13:23 IST
Last Updated 11 ಜೂನ್ 2023, 13:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್: ಅಮೃತಸರದಿಂದ ಅಹಮದಾಬಾದ್‌ಗೆ ಹೊರಟಿದ್ದ ಇಂಡಿಗೊ ಏರ್‌ಲೈನ್ಸ್ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನದ ಲಾಹೋರ್ ಸಮೀಪ ಹೋಗಿತ್ತು ಎಂದು ವರದಿಯಾಗಿದೆ.

ಗುಜ್ರನ್‌ವಾಲಾವರೆಗೆ ತೆರಳಿದ ಇಂಡಿಗೊ ವಿಮಾನ, ಯಾವುದೇ ಅಪಾಯವಿಲ್ಲದೆ ಭಾರತೀಯ ವಾಯುಪ್ರದೇಶಕ್ಕೆ ಹಿಂತಿರುಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಿಮಾನವು ಶನಿವಾರ ಸಂಜೆ 7.30ರ ಸುಮಾರಿಗೆ ಲಾಹೋರ್ ಸಮೀಪ ತಲುಪಿದ್ದು, ರಾತ್ರಿ ಸುಮಾರು 8.01ಕ್ಕೆ ಭಾರತಕ್ಕೆ ಮರಳಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. ಆದರೆ, ವಿಮಾನಯಾನ ಸಂಸ್ಥೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ADVERTISEMENT

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಇಂತಹ ಹಾರಾಟಕ್ಕೆ ಅಂತರರಾಷ್ಟ್ರೀಯವಾಗಿ ಅನುಮತಿ ಇರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ, ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್‌ (ಪಿಐಎ) ವಿಮಾನವು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿತ್ತು ಹಾಗೂ ಸುಮಾರು 10 ನಿಮಿಷಗಳ ಕಾಲ ಅಲ್ಲಿಯೇ ಇತ್ತು.

ಪಾಕಿಸ್ತಾನದಲ್ಲಿ ಕಳಪೆ ಗೋಚರತೆಯಿಂದಾಗಿ ಹಲವು ವಿಮಾನಗಳ ಹಾದಿ ಬದಲಿಸಲಾಗಿದ್ದು, ಇನ್ನು ಕೆಲವು ವಿಮಾನಗಳ ಹಾರಾಟ ವಿಳಂಬಗೊಂಡಿದೆ.

ಗೋಚರತೆ ಕ್ಷೀಣಿಸಿದ ಕಾರಣ ಲಾಹೋರ್‌ನಿಂದ ತೆರಳುತ್ತಿದ್ದ ಹಲವಾರು ವಿಮಾನಗಳ ಮಾರ್ಗ ಇಸ್ಲಾಮಾಬಾದ್‌ಗೆ ಬದಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.