ADVERTISEMENT

ನೇಮಕಾತಿಯಲ್ಲಿ ತಾರತಮ್ಯ: ಇಂಡೋನೇಷ್ಯಾದಲ್ಲಿ ಭಾರಿ ಪ್ರತಿಭಟನೆ

ಇಂಡೊನೇಷ್ಯಾ: ಅಂಗವಿಕಲರು, ಗರ್ಭಿಣಿಯರು, ತೃತೀಯಲಿಂಗಿಗಳಿಗೆ ನಿಷೇಧ

ಏಜೆನ್ಸೀಸ್
Published 22 ನವೆಂಬರ್ 2019, 18:56 IST
Last Updated 22 ನವೆಂಬರ್ 2019, 18:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಕಾರ್ತಾ: ‘ಇಂಡೊನೇಷ್ಯಾದಲ್ಲಿ ವಿವಿಧ ಸಚಿವಾಲಯಗಳು ಉದ್ಯೋಗ ನೇಮಕಾತಿಗೆ ಗರ್ಭಿಣಿ ಯರು, ಅಂಗವಿಕಲರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅರ್ಜಿಗಳನ್ನು ನಿರಾಕರಿಸುತ್ತಿವೆ’ ಎಂದು ಅಲ್ಲಿನ ಒಂಬುಡ್ಸ್‌ಮನ್‌ ತಿಳಿಸಿದ್ದಾರೆ. ಇದು, ಉದ್ದೇಶಪೂರ್ವಕವಾಗಿ ಮತ್ತು ದ್ವೇಷದಿಂದ ಹೇರುತ್ತಿರುವ ನಿರ್ಬಂಧವಾಗಿದೆ ಎಂದೂ ಆರೋಪಿಸಿದ್ದಾರೆ.

ವಿಶ್ವದಲ್ಲಿಯೇ ಅತ್ಯಧಿಕ ಸಂಖ್ಯೆ ಯಲ್ಲಿ ಮುಸ್ಲಿಮರು ಇರುವ ಈ ದೇಶದಲ್ಲಿ ಸುಮಾರು ಎರಡು ಲಕ್ಷ ನಾಗರಿಕ ಸೇವೆ ಹುದ್ದೆಗಳಿಗೆ ಅರ್ಜಿ ಕರೆದಿರುವ ಹಿಂದೆಯೇ ಈ ಆರೋಪ ಕೇಳಿಬಂದಿದೆ. ದೇಶದಲ್ಲಿ ಸುಮಾರು 26 ಕೋಟಿ ಜನಸಂಖ್ಯೆಯಿದ್ದು ಇತ್ತೀಚಿನ ವರ್ಷಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ, ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಆರೋಪವಿದೆ.

‘ರಕ್ಷಣೆ, ವಾಣಿಜ್ಯ ಸಚಿವಾಲಯ ಹಾಗೂ ಅಟಾರ್ನಿ ಜನರಲ್ ಕಚೇರಿ (ಎಜಿಒ) ನೀಡಿರುವ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸುವ ಜಾಹೀರಾತು ಗಳಲ್ಲಿ ತಾರತಮ್ಯವಿದೆ’ ಎಂದು ಒಂಬುಡ್ಸ್‌ ಮನ್‌ ನಿನಿಕ್‌ ರಹಯು ತಿಳಿಸಿದ್ದಾರೆ.

ADVERTISEMENT

‘ಗರ್ಭಿಣಿಯರು ಉದ್ಯೋಗಕ್ಕೆ ಅರ್ಜಿ ಸಲ್ಲಿಸದಂತೆ ರಕ್ಷಣಾ ಸಚಿವಾಲಯ ನಿಷೇಧಿಸಿದೆ. ವಾಣಿಜ್ಯ ಸಚಿವಾಲಯ ಮತ್ತು ಎಜಿಒ ಕಚೇರಿಗಳು ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸದಂತೆ ನಿಷೇಧಿ ಸಿವೆ’ ಎಂದು ನಿನಿಕ್‌ ಅವರು ತಿಳಿಸಿದರು.

ಎಜಿಒ ಕಚೇರಿ ತನ್ನ ಜಾಹೀರಾತಿನಲ್ಲಿ ‘ಸಾಮಾನ್ಯ ಜನರು ಮಾತ್ರ ಅರ್ಜಿ ಸಲ್ಲಿಸಬೇಕು’ ಎಂದು ಉಲ್ಲೇಖಿಸಿದೆ. ತೃತೀಯ ಲಿಂಗಿಗಳು ಎಂಬ ಕಾರಣಕ್ಕೇ ಅರ್ಜಿ ಸಲ್ಲಿಸದಂತೆ ನಿಷೇಧ ಹೇರುವುದು ಮಾನವಹಕ್ಕುಗಳ ಉಲ್ಲಂಘನೆ ಆಗಲಿದೆ ಎಂದು ದೂರಿದ್ದಾರೆ.

‘ನೇಮಕಾತಿ ನಿಯಮಗಳನ್ನು ಪರಿಷ್ಕರಿಸಬೇಕು ನಾವು ಈ ಸಚಿವಾಲಯಗಳಿಗೆ ಕೋರಿದ್ದೇವೆ. ಕೇವಲ ವಾಣಿಜ್ಯ ಸಚಿವಾಲಯವಷ್ಟೇ ಪ್ರತಿಕ್ರಿಯಿಸಿದೆ. ಎಜಿಒ ಕಚೇರಿಯು ತನ್ನ ಜಾಹೀರಾತಿನಲ್ಲಿ ಅಂಧರು, ಮಾನಸಿಕ ಅಥವಾ ದೈಹಿಕ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಾರದು ಎಂದು ಉಲ್ಲೇಖಿಸಿದೆ’ ಎಂದು ತಿಳಿಸಿದ್ದಾರೆ.

‘ಹೀಗೆ ನಿರ್ಬಂಧವನ್ನು ಹೇರುವುದು ದ್ವೇಷ ಆಧಾರಿತ ನೀತಿಯಾಗಲಿದೆ’ ಎಂದು ಇಂಡೋನೇಷಿಯದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಉಸ್ಮಾನ್‌ ಹಮೀದ್‌ ಅವರು ಪ್ರತಿಕ್ರಿಯಿಸಿದರು.

‘ಇಂಡೋನೇಷ್ಯಾ ಅತ್ಯುತ್ತಮ ಅಭ್ಯರ್ಥಿಗಳನ್ನು ನಾಗರಿಕ ಸೇವೆಗೆ ನೇಮಕ ಮಾಡಬೇಕು. ಉದ್ದೇಶಪೂರ್ವಕ, ದ್ವೇಷದ ನಿರ್ಬಂಧಗಳನ್ನು ಹೇರ ಬಾರದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.