
ಸುಮುರ್,ಇಂಡೊನೇಷ್ಯಾ: ಶನಿವಾರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ಪರಿಣಾಮವಾಗಿ ಉಂಟಾದ ಸುನಾಮಿಯಲ್ಲಿ ಕೊಚ್ಚಿ ಹೋದವರು ಸಾವಿರಾರು ಮಂದಿ. ಮಂಗಳವಾರದ ಮಾಹಿತಿ ಪ್ರಕಾರ, ಜಲಪ್ರಳಯದಿಂದ ಸಾವಿಗೀಡಾದವರ ಸಂಖ್ಯೆ 429 ಮುಟ್ಟಿದೆ.

ಸುಂಡಾ ಜಲಸಂಧಿಯ ಬೀಚ್‌ಗಳಲ್ಲಿ ಶನಿವಾರ ರಾತ್ರಿ 9.27ರ ಸುಮಾರಿಗೆ ಅಪ್ಪಳಿಸಿದ ಸುನಾಮಿ ಈವರೆಗೆ 1400 ಮಂದಿಯನ್ನು ಗಾಯಗೊಳಿಸಿದ್ದು, 429 ಜನರು ಮೃತಪಟ್ಟಿದ್ದಾರೆ. ಇನ್ನೂ ಪತ್ತೆಯಾಗದವರು 128 ಮಂದಿ. ಮನೆ ಕಳೆದುಕೊಂಡು ಸಾವಿರಾರು ಮಂದಿ ನಿರ್ಗತಿಕರಾಗಿದ್ದಾರೆ.
ಪಶ್ಚಿಮ ಜಾವಾ ಹಾಗೂ ದಕ್ಷಿಣ ಸುಮಾತ್ರ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಮಿಲಿಟರಿ ಪಡೆಗಳು, ಸರ್ಕಾರದ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ತೊಡಗಿದ್ದಾರೆ. ಬೀಚ್‌ಗಳ ಸಮೀಪ ಮರಳಿನಲ್ಲಿ ಹೂತಿರುವ ಜಾಗಗಳಲ್ಲಿ ಶೋಧನಾ ಕಾರ್ಯ ನಡೆಯುತ್ತಿದ್ದು, ಉಸಿರು ಬಿಗಿ ಹಿಡಿದು ಬದುಕಿರುವವರು, ಸಾವಿಗೀಡಾದ ದೇಹಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಮೃತರ ವಸ್ತುಗಳನ್ನು ಗುರುತಿಸಿರುವ ಕಾಣೆಯಾದವರ ಸಂಬಂಧಿಕರು ಮೌನದ ಕಣ್ಣೀರಿನಲ್ಲಿ ಮುಳುಗಿದ್ದಾರೆ.
ಅನಕ್ ಕ್ರಕಟೊವ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ ಸಂಭವಿಸಿತ್ತು. ಹೋಟೆಲ್‌ಗಳು, ನೂರಾರು ಮನೆಗಳು, ಬೀಚ್ ಬದಿಯಲ್ಲಿ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಬಹುಪಾಲು ಜನ ಕೊಚ್ಚಿ ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.