ADVERTISEMENT

ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ ಪ್ರಧಾನಿಗೆ ಉದ್ಯಮಿಗಳ ಸಲಹೆ

ಪಿಟಿಐ
Published 25 ಏಪ್ರಿಲ್ 2024, 13:27 IST
Last Updated 25 ಏಪ್ರಿಲ್ 2024, 13:27 IST
ಶಹಬಾಜ್‌ ಷರೀಫ್‌
ಶಹಬಾಜ್‌ ಷರೀಫ್‌   

ಇಸ್ಲಾಮಾಬಾದ್‌: ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ತರಲು ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸುವಂತೆ ಪಾಕಿಸ್ತಾನದ ಪ್ರಮುಖ ಉದ್ಯಮಿಗಳು ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಒತ್ತಾಯಿಸಿದ್ದಾರೆ.

ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಕರಾಚಿಗೆ ಭೇಟಿ ನೀಡಿದ ಪ್ರಧಾನಿ ಷರೀಫ್‌, ಉದ್ಯಮಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಸಲಹೆಗಳನ್ನು ನೀಡುವಂತೆ ಉದ್ಯಮಿಗಳಿಗೆ ಕೇಳಿದ್ದರು.

ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ಪ್ರಧಾನ ಮಂತ್ರಿಯವರ ಸಂಕಲ್ಪವನ್ನು ಶ್ಲಾಘಿಸಿದ ಉದ್ಯಮಿಗಳು, ನೆರೆಯ ರಾಷ್ಟ್ರದೊಂದಿಗೆ(ಭಾರತ) ವ್ಯಾಪಾರ ಸಂಬಂಧ ಪುನರ್‌ ಪ್ರಾರಂಭಿಸುವ ಕುರಿತು ಪ್ರಸ್ತಾಪಿಸಿದರು. ದೇಶದ ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ರಾಜಕೀಯ ಸ್ಥಿರತೆ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ADVERTISEMENT

ಅಲ್ಲದೇ ರಫ್ತಿನ ಮೂಲಕ ಆರ್ಥಿಕತೆ ಮೇಲಕ್ಕೆತ್ತುವ ಪ್ರಧಾನಿ ಅವರ ಸಲಹೆಯನ್ನು ಉದ್ಯಮಿಗಳು ಅಸಾಧ್ಯ ಎಂದು ತಿಳಿಸಿದ್ದು, ಹೆಚ್ಚಿದ ಇಂಧನ ದರ, ಗೊಂದಲದಿಂದ ಕೂಡಿದ ಸರ್ಕಾರಿ ನೀತಿಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎಂದು ಹೇಳಿದರು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

‘ನೀವು(ಶೆಹಬಾಜ್ ಷರೀಫ್) ಅಧಿಕಾರ ವಹಿಸಿಕೊಂಡ ನಂತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಪ್ರಯತ್ನಿಸಿದ್ದೀರಿ. ಐಎಂಎಫ್‌ ಜೊತೆಗಿನ ಒಪ್ಪಂದವು ಅದರಲ್ಲಿ ಒಂದಾಗಿದೆ’ ಎಂದು ಬಂಡವಾಳ ಮಾರುಕಟ್ಟೆ ದೈತ್ಯ ಆರಿಫ್ ಹಬೀಬ್ ಗ್ರೂಪ್‌ನ ಮುಖ್ಯಸ್ಥ ಆರಿಫ್ ಹಬೀಬ್ ಇದೇ ವೇಳೆ ಪ್ರಧಾನಿ ಅವರನ್ನು ಪ್ರಶಂಸಿದ್ದಾರೆ.

ಪಾಕಿಸ್ತಾನದಲ್ಲಿ ಜೀವನ ನಿರ್ವಹಣೆ ವೆಚ್ಚವು ಏಷ್ಯಾದಲ್ಲೇ ಅತ್ಯಧಿಕವಾಗಿದ್ದು, ಇದಕ್ಕೆ ದೇಶದ ಹಣದುಬ್ಬರ ಪ್ರಮಾಣ ಶೇ 25ರ ದರದಲ್ಲಿ ಹೆಚ್ಚುತ್ತಿರುವುದು ಮತ್ತು ಆರ್ಥಿಕ ಬೆಳವಣಿಗೆಯೂ ಶೇ 1.9ರ ದರದಲ್ಲಿ ಮಂದಗತಿಯಲ್ಲಿ ಸಾಗಿರುವುದೇ ಕಾರಣ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಕಳೆದ ವಾರ ಪ್ರಕಟಿಸಿದ ವರದಿಯಲ್ಲಿ ಹೇಳಿತ್ತು.

2019ರಂದು ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮುರಿದುಬಿದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.