ವಿಶ್ವಸಂಸ್ಥೆ: ವಿಶ್ವಸಂಸ್ಥೆ ಕೇಂದ್ರ ಕಚೇರಿ ಸಭಾಂಗಣವನ್ನು ಬುಧವಾರ ಭಾರತದ ಜನಪ್ರಿಯ ಪೇಯ ‘ಚಹಾ‘ದ ಸ್ವಾದ, ಪರಿಮಳ ಆವರಿಸಿತ್ತು. ಕಾರ್ಯಕ್ರಮದ ‘ಕೇಂದ್ರಬಿಂದು’ ಚಹಾ ಆಗಿತ್ತು.
‘ಅಂತರರಾಷ್ಟ್ರೀಯ ಚಹಾ ದಿನ’ ನಿಮಿತ್ತ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಮಿಷನ್, ‘ಬದುಕಿಗಾಗಿ ಚಹಾ, ಸುಸ್ಥಿರಾಭಿವೃದ್ಧಿ ಗುರಿ ಸಾಧನೆಗೆ ಚಹಾ’ ವಿಷಯ ಕುರಿತ ಉನ್ನತ ಮಟ್ಟದ ಸಭೆ ಏರ್ಪಡಿಸಿತ್ತು.
‘ಚಹಾ ಜಗತ್ತಿನಲ್ಲೇ ನೀರಿನ ನಂತರ ಅತಿ ಹೆಚ್ಚು ಸೇವಿಸುವ ಪಾನೀಯ. ಸೇರ್ಪಡೆಯುಕ್ತ ಆರ್ಥಿಕ ಪ್ರಗತಿಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಚಹಾದ ಕೊಡುಗೆ ಪ್ರಮುಖವಾದುದು’ ಎಂದು ಸ್ಮರಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಅತಿಥಿಗಳಿಗೆ ಭಿನ್ನ ಸ್ವಾದ, ಸುವಾಸನೆಯ ಚಹಾ ನೀಡಲಾಯಿತು. ಇದರಲ್ಲಿ ದಾರ್ಜಿಲಿಂಗ್ ಟೀ, ಮಸಾಲಾ ಚಾಯ್, ಅಸ್ಸಾಂ ಮತ್ತು ನೀಲಗಿರಿ ಟೀ ಸೇರಿದ್ದವು.
ಭಾರತದ ಶಾಶ್ವತ ಮಿಷನ್‌ನ ಪ್ರತಿನಿಧಿ ಮತ್ತು ವಿಶ್ವಸಂಸ್ಥೆಯ ರಾಯಭಾರಿ ಪರ್ವತನೇನಿ ಹರೀಶ್, ವಿಶ್ವಸಂಸ್ಥೆ ಅಧಿಕಾರಿ ಅಂಜೆಲಿಕಾ ಜಾಕೋಮ್, ಶ್ರೀಲಂಕಾ, ಕೆನ್ಯಾ ಮತ್ತು ಚೀನಾದ ಪ್ರತಿನಿಧಿಗಳಿದ್ದರು.
ಭಾರತವಲ್ಲದೆ, ಪ್ರಮುಖವಾಗಿ ಟೀ ಬೆಳೆಯುವ ರಾಷ್ಟ್ರಗಳ ಪ್ರತಿನಿಧಿಗಳು, ಚಹಾ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದರು.
‘ಭಾರತದಲ್ಲಿ ಚಹಾ ಎಂದರೆ ಅದು ಕೇವಲ ಒಂದು ವ್ಯಾಪಾರ ಅಥವಾ ಪೇಯವಷ್ಟೇ ಅಲ್ಲ. ಪರಿವರ್ತನೆಯ ಸಂಕೇತ. ಇದು ಉದ್ಯಮವಾಗಿ ಬೆಳೆದಿದೆ. ಗ್ರಾಮಗಳ ಸಬಲೀಕರಣ, ಮಹಿಳಾ ಸಬಲೀಕರಣದ ಜೊತೆಗೆ ರಫ್ತು ಆಧಾರಿತ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಹರೀಶ್ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2019ರಲ್ಲಿ ಪ್ರತಿ ವರ್ಷ ಮೇ 21 ಅನ್ನು ‘ಅಂತರರಾಷ್ಟ್ರೀಯ ಚಹಾ ದಿನ’ವಾಗಿ ಆಚರಿಸಲು ಘೋಷಿಸಿತ್ತು. 2015ರಲ್ಲಿ ಭಾರತ ಈ ಕುರಿತು ಪ್ರಸ್ತಾವವನ್ನು ಮಂಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.