ADVERTISEMENT

ದಕ್ಷಿಣ ಆಫ್ರಿಕಾ: ವಿಶ್ವ ಪಾರಂಪರಿಕ ತಾಣದಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ

ಪಿಟಿಐ
Published 20 ಜೂನ್ 2025, 11:27 IST
Last Updated 20 ಜೂನ್ 2025, 11:27 IST
   

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿನ ಯುನೆಸ್ಕೊ ವಿಶ್ವ ‍ಪಾರಂಪರಿಕ ತಾಣ ‘ಕ್ರೇಡಲ್‌ ಆಫ್ ಹ್ಯೂಮನ್‌ಕೈಂಡ್‌’ನಲ್ಲಿ ಸಾವಿರಾರು ಜನ ಮತ್ತು ಯೋಗಪಟುಗಳು ಸೇರಿ ಶನಿವಾರ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದ್ದಾರೆ.

11ನೇ ವರ್ಷದ ಅಂತರರಾಷ್ಟ್ರೀಯ ಯೋಗದಿನದ ಪೂರ್ವಭಾವಿಯಾಗಿ ಪ್ರಿಟೋರಿಯಾದಲ್ಲಿನ ಭಾರತದ ಹೈಕಮಿಷನ್ ಮತ್ತು ಜೋಹಾನ್ಸ್‌ಬರ್ಗ್‌ ಹಾಗೂ ಡರ್ಬನ್‌ನಲ್ಲಿನ ಕಾನ್ಸುಲೇಟ್‌ಗಳು ಹಲವೆಡೆ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಇದರ ಸಮಾರೋಪದ ಭಾಗವಾಗಿ ‘ಕ್ರೇಡಲ್‌ ಆಫ್ ಹ್ಯೂಮನ್‌ಕೈಂಡ್‌’, ದಕ್ಷಿಣ ಆಫ್ರಿಕಾದ ಆಡಳಿತ ಕೇಂದ್ರವಾಗಿರುವ ಯೂನಿಯನ್‌ ಕಟ್ಟಡ, ಡ್ರಾಕೆನ್ಸ್‌ಬರ್ಗ್‌ ಬೆಟ್ಟಗಳಲ್ಲಿನ ರಾಯಲ್‌ ನಟಲ್‌ ಉದ್ಯಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯೋಗ ದಿನವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ADVERTISEMENT

‘ಕ್ರೇಡಲ್‌ ಆಫ್ ಹ್ಯೂಮನ್‌ಕೈಂಡ್‌’ ಸ್ಥಳವು ಆಳವಾದ ಸಾಂಸ್ಕೃತಿಕ ಮತ್ತು ಮಾನವ ಇತಿಹಾಸದ ಮೌಲ್ಯಗಳನ್ನು ಹೊಂದಿದೆ. ಇಲ್ಲಿ ಯೋಗದಿನವನ್ನು ಆಚರಿಸುವುದರಿಂದ ಭಾರತದ ಪ್ರಾಚೀನ ತತ್ವಶಾಸ್ತ್ರ (ಯೋಗ) ಮತ್ತು ಮಾನವಿಯತೆ, ಪ್ರಕೃತಿ ನಡುವಿನ ಸಂಬಂಧವನ್ನು ಸಾರಿದಂತಾಗುತ್ತದೆ’ ಎಂದು ಜೋಹಾನ್ಸ್‌ಬರ್ಗ್‌ನಲ್ಲಿರುವ ಕಾನ್ಸುಲ್ ಜನರಲ್ ಮಹೇಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಅವರು ತಂಗಿದ್ದ ಟಾಲ್‌ಸ್ಟಾಯ್‌ ಫಾರ್ಮ್‌ನಲ್ಲಿ ಭಾರತೀಯ ಯೋಗಪಟುವಿನ ನೇತೃತ್ವದಲ್ಲಿ ಕಳೆದ ವಾರ ದಕ್ಷಿಣ ಆಫ್ರಿಕಾದ ನೂರಾರು ಮಕ್ಕಳು ಯೋಗಾಭ್ಯಾಸ ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.