ADVERTISEMENT

‘ಸೂಪರ್‌ ಪವರ್‌’ ಜತೆಗೆ ಪರೋಕ್ಷ ಯುದ್ಧಕ್ಕೆ ಇರಾನ್‌ ಸಜ್ಜು

ರಾಯಿಟರ್ಸ್
Published 8 ಜನವರಿ 2020, 20:00 IST
Last Updated 8 ಜನವರಿ 2020, 20:00 IST
ಇರಾನ್
ಇರಾನ್   

ದುಬೈ: ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವುದಕ್ಕೆ ಮುನ್ನ ಇರಾನ್ ಹಲವು ವರ್ಷಗಳ ಸಿದ್ಧತೆ ನಡೆಸಿದೆ. ತನಗಿಂತ ಭಾರಿ ಬಲಶಾಲಿಯಾದ ಸೂಪರ್‌ ಪವರ್‌ ದೇಶವನ್ನು ಎದುರಿಸಲು ಸಜ್ಜಾಗಿದೆ.

ಇರಾನ್‌ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಯೋಧರಿರುವ ಸೇನೆ ಇದೆ. ಅದರಲ್ಲಿ, ರೆವಲ್ಯೂಷನರಿ ಗಾರ್ಡ್ಸ್‌ನ 1.25 ಲಕ್ಷ ಯೋಧರೂ ಸೇರಿದ್ದಾರೆ ಎಂದು ರಕ್ಷಣಾ ಅಧ್ಯಯನದ ಅಂತರರಾಷ್ಟ್ರೀಯ ಸಂಸ್ಥೆಯ ವರದಿ ಕಳೆದ ವರ್ಷವೇ ಹೇಳಿತ್ತು. ರೆವಲ್ಯೂಷನರಿ ಗಾರ್ಡ್ಸ್‌ಗೆ ಅಮೆರಿಕದ ದಾಳಿಯಲ್ಲಿ ಬಲಿಯಾದ ಖಾಸಿಂ ಸುಲೇಮಾನಿ ಕಮಾಂಡರ್‌ ಆಗಿದ್ದರು.

ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ನಿಷೇಧಗಳಿಂದಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವುದು ಅಥವಾ ಅಭಿವೃದ್ಧಿಪಡಿಸಿಕೊಳ್ಳುವುದು ಇರಾನ್‌ಗೆ ಬಹಳ ಕಷ್ಟವಾಗಿತ್ತು.ಈ ಕೊರತೆಯನ್ನು ತುಂಬಲು ಇರಾನ್‌ ಬೇರೆ ರೀತಿಯ ಕಾರ್ಯತಂತ್ರವನ್ನು ರೂಪಿಸಿದೆ. ಬ್ಯಾಲಿಸ್ಟಿಕ್‌ ಕ್ಷಿಪಣಿಗಳು, ಅಪಾಯಕಾರಿ ಡ್ರೋನ್‌ಗಳ ಅಭಿವೃದ್ಧಿ ಈ ಕಾರ್ಯತಂತ್ರದ ಭಾಗ. ಅದರ ಜತೆಗೆ, ಇರಾಕ್‌, ಸಿರಿಯಾ, ಲೆಬನಾನ್‌ ಮತ್ತು ಯೆಮನ್‌ನಲ್ಲಿನ ಬಂಡುಕೋರ ಗುಂಪುಗಳ ಜತೆಗೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ, ಸಾಂಪ್ರದಾಯಿಕ ಯುದ್ಧರಂಗಕ್ಕೆ ಇಳಿಯದೆಯೇ ‘ಶತ್ರು’ವಿಗೆ ಹಾನಿ ಮಾಡಬಹುದು ಎಂಬ ಲೆಕ್ಕಾಚಾರವನ್ನು ಇರಾನ್‌ ಹೊಂದಿದೆ.

ADVERTISEMENT

‘ಸಾಂಪ್ರದಾಯಿಕ ಯುದ್ಧದಲ್ಲಿ ಅವರು (ಇರಾನ್‌) ನೆಲಕಚ್ಚಿ ಹೋಗುತ್ತಾರೆ. ಅವರ ಸೇನೆಯು ದುರ್ಬಲ ಮತ್ತು ಹಳೆಯ ಕಾಲದ್ದು. ಹಾಗಾಗಿ, ಅವರು ಅಸಾಂಪ್ರದಾಯಿಕ ದಾಳಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಭಾರಿ ಮೊತ್ತ ವ್ಯಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನೋಡಿದರೆ ಅವರು ದೊಡ್ಡ ಮಟ್ಟದಲ್ಲಿ ಸನ್ನದ್ಧರಾಗಿದ್ದಾರೆ’ ಎಂದು ಬ್ರಿಟನ್‌ನ ನಿವೃತ್ತ ಕಮಾಂಡ್‌ ಒಬ್ಬರು ಹೇಳುತ್ತಾರೆ.

ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಪ್ರತಿಸ್ಪರ್ಧಿಯಾಗಿರುವ ಸೌದಿ ಅರೇಬಿಯಾ, ಕಳೆದ ವರ್ಷ ಇಂತಹ ಯುದ್ಧ ತಂತ್ರದ ಪರಿಣಾಮ ಅನುಭವಿಸಿದೆ. ತೈಲ ಸಂಸ್ಕರಣ ಘಟಕದ ಮೇಲೆ ನಡೆದ ಡ್ರೋನ್‌ ದಾಳಿಯು ಜಾಗತಿಕ ಕಚ್ಚಾ ತೈಲ ಪೂರೈಕೆಯನ್ನು ಶೇ 5ರಷ್ಟು ಕಡಿತಗೊಳಿಸಿತ್ತು. ‘ಇರಾನ್‌ ಈ ದಾಳಿ ನಡೆಸಿದೆ’ ಎಂದು ಅಮೆರಿಕ ಮತ್ತು ಸೌದಿ ಆರೋಪಿಸಿದ್ದವು. ಇರಾನ್‌ ಇದನ್ನು ನಿರಾಕರಿಸಿತ್ತು.

ಕ್ಷಿಪಣಿಗಳು

ಮಧ್ಯ ಪ್ರಾಚ್ಯದಲ್ಲಿ ಅತಿ ಹೆಚ್ಚು ಕ್ಷಿಪಣಿ ಸಂಗ್ರಹ ಹೊಂದಿರುವ ದೇಶ ಇರಾನ್‌. ಹಿಂದೆಲ್ಲ, ವ್ಯಾಪಕವಾಗಿ ಬಳಕೆಯಾಗುತ್ತಿದ್ದ ‘ಸ್ಕಡ್‌’ ಕ್ಷಿಪಣಿಗಳನ್ನು ಆಧರಿಸಿ ತಯಾರಿಸಿದ ಕ್ಷಿಪಣಿಗಳು ಕನಿಷ್ಠ 750 ಕಿ.ಮೀ. ವ್ಯಾಪ್ತಿ ಹೊಂದಿವೆ. ಉತ್ತರ ಕೊರಿಯಾದ ‘ನೊ ಡಾಂಗ್‌’ ಕ್ಷಿಪಣಿಯ ವಿನ್ಯಾಸ ಬಳಸಿಕೊಂಡು ಅಭಿವೃದ್ಧಿಪಡಿಸಿದ ಕ್ಷಿಪಣಿಗಳೂ ಇರಾನ್‌ ಬಳಿ ಇವೆ. ಇವುಗಳ ವ್ಯಾಪ್ತಿ ಸುಮಾರು 2,000 ಕಿ.ಮೀ. ಇದು ಇಸ್ರೇಲ್‌ ಅಥವಾ ಯುರೋಪ್‌ನ ಆಗ್ನೇಯ ಭಾಗದವರೆಗೆ ತಲುಪಬಹುದು ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (ಡಿಐಎ) ಕಳೆದ ವರ್ಷ ಹೇಳಿತ್ತು.

ಗೂಢಚರ್ಯೆಗೆ ಬಳಸಬಹುದಾದ, ಸ್ಫೋಟಕಗಳ ಮೂಲಕ ದಾಳಿ ನಡೆಸಬಹುದಾದ ಡ್ರೋನ್‌ಗಳನ್ನು ಇರಾನ್‌ ಹೊಂದಿದೆ.

ರೆವಲ್ಯೂಷನರಿ ಗಾರ್ಡ್ಸ್‌ ಬಳಿಯಲ್ಲಿ ಕ್ಷಿಪಣಿಸಜ್ಜಿತ ಸ್ಪೀಡ್‌ಬೋಟ್‌ಗಳ ತುಕಡಿಗಳಿವೆ. ಅಮೆರಿಕದ ಸೇನಾ ನೌಕೆಗಳು ಅಥವಾ ತೈಲ ಹಡಗುಗಳ ವಿರುದ್ಧ ನಿಯೋಜಿಸಬಹುದಾದ ಸಣ್ಣ ಜಲಾಂತರ್ಗಾಮಿಗಳಿವೆ. ಕಳೆದ ವರ್ಷ ಆರು ಟ್ಯಾಂಕರ್‌ಗಳ ಮೇಲೆ ಇರಾನ್‌ ದಾಳಿ ನಡೆಸಿದೆ ಎಂದು ಅಮೆರಿಕ ಹೇಳಿದೆ.

***

ಹಡಗು, ಟ್ಯಾಂಕ್‌, ಯುದ್ಧ ವಿಮಾನಗಳ ಲೆಕ್ಕ ಹಿಡಿದರೆ ಇರಾನ್‌ ಬಹಳ ದುರ್ಬಲ. ಆದರೆ, ನೌಕೆ ನಿರೋಧಕ ಕ್ಷಿಪಣಿಗಳು, ಬ್ಯಾಲಿಸ್ಟಿಕ್‌ ಕ್ಷಿಪಣಿಗಳು, ಡ್ರೋನ್‌ಗಳನ್ನು ಲೆಕ್ಕ ಹಾಕಿದರೆ ಇರಾನ್‌ ಸಾಮರ್ಥ್ಯ ಗಣನೀಯ

–ಜೆರೆಮಿ ಬಿನ್ನಿ, ಜೇನ್ಸ್‌ ಡಿಫೆನ್ಸ್‌ ವೀಕ್ಲಿಯ ಮಧ್ಯಪ್ರಾಚ್ಯ, ಆಫ್ರಿಕಾ ವಿಭಾಗದ ಸಂಪಾದಕ

ಇರಾನ್‌ ಇರುವ ಪರ್ಷಿಯಾ ಕೊಲ್ಲಿಯಲ್ಲಿ ದೊಡ್ಡ ಹಡಗುಗಳು, ಯುದ್ಧ ನೌಕೆಗಳು, ಹಡಗುಗಳನ್ನು ನಾಶ ಮಾಡಬಲ್ಲ ನೌಕೆಗಳು ಬೇಕಾಗಿಲ್ಲ. ಕ್ಷಿಪಣಿ ಸಜ್ಜಿತ ಸ್ಪೀಡ್‌ಬೋಟ್‌ಗಳು, ಗನ್‌ಬೋಟ್‌ಗಳೇ ಬೇಕಾದ ಕೆಲಸ ಮಾಡಬಲ್ಲವು

–ಹುಸೇನ್‌ ಆರ್ಯನ್‌, ಸೇನಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.