
ಅಬುದಾಬಿ ಮೇಲೆ ಇರಾನ್ ಕ್ಷಿಪಣಿ ದಾಳಿಯ ದೃಶ್ಯ
ಎಕ್ಸ್ ಚಿತ್ರ
ದುಬೈ/ ದೋಹಾ: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ಇರಾನ್ ಸೇನೆ ಮಂಗಳವಾರ ಬೆಳಿಗ್ಗೆ ಡ್ರೋನ್ ದಾಳಿ ನಡೆಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿನ ತೈಲ ಮತ್ತು ಅನಿಲ ಮೂಲಸೌಕರ್ಯಗಳು ಹಾಗೂ ರಾಜತಾಂತ್ರಿಕ ಗುರಿಗಳ ಮೇಲಿನ ದಾಳಿಯನ್ನು ಇರಾನ್ ಮುಂದುವರಿಸಿದೆ.
ಮತ್ತೊಂದೆಡೆ, ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಸತತ ನಾಲ್ಕನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿವೆ. ‘ಇದುವರೆಗಿನ ದಾಳಿಯು ಒಂದು ತಿಂಗಳಿಗೂ ಹೆಚ್ಚು ನಡೆಯುವ ನಿರಂತರ ಮಿಲಿಟರಿ ಕಾರ್ಯಾಚರಣೆಯ ಆರಂಭ ಮಾತ್ರ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ.
‘ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್‌ಗಳು ಅಪ್ಪಳಿಸಿದ್ದು, ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡಕ್ಕೆ ತುಸು ಹಾನಿಯಾಗಿದೆ’ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಯಾವುದೇ ಕಾರಣಕ್ಕೂ ರಾಯಭಾರ ಕಚೇರಿಗೆ ಬರದಂತೆ ಅಮೆರಿಕನ್ನರಿಗೆ ಸೂಚನೆ ನೀಡಲಾಗಿದೆ.
ರಿಯಾದ್ ಸೇರಿದಂತೆ ಎರಡು ನಗರಗಳಲ್ಲಿ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾ ಹೇಳಿದೆ. ಆದರೂ ಎರಡು ಡ್ರೋನ್‌ಗಳು ವಾಯು ರಕ್ಷಣಾ ವ್ಯವಸ್ಥೆಯನ್ನು ದಾಟಿ ರಾಯಭಾರ ಕಚೇರಿಗೆ ಅಪ್ಪಳಿಸಿವೆ.
ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ಇರಾನ್, ಸೋಮವಾರ ದಾಳಿ ನಡೆಸಿತ್ತು. ಮುಂದಿನ ಸೂಚನೆ ಬರುವವರೆಗೂ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ ಎಂದು ಕುವೈತ್ ಹೇಳಿದೆ.
ಕುವೈತ್, ಬಹರೇನ್, ಇರಾಕ್, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳ ಕೆಲವು ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ.
ಇಸ್ರೇಲ್‌ನ ಕೆಲವು ಗುರಿಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಜೆರುಸಲೇಂ ಮತ್ತು ಟೆಲ್ ಅವೀವ್‌ನಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ.
‘ಇಸ್ರೇಲ್‌ನ ಕೇಂದ್ರ ಭಾಗದ ಮೂರು ತಾಣಗಳಲ್ಲಿ ಕ್ಷಿಪಣಿ ಬಿದ್ದು ಏಳು ಮಂದಿ ಗಾಯಗೊಂಡಿದ್ದಾರೆ’ ಎಂದು ಮಗೇನ್ ಡೇವಿಡ್ ಅಡೋಮ್ ತುರ್ತು ಸೇವೆಗಳ ಸಂಸ್ಥೆ ತಿಳಿಸಿದೆ.
ಟೆಹರಾನ್ ಮೇಲೆ ಭಾರಿ ದಾಳಿ: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಸ್ಫೋಟಗಳು ಸಂಭವಿಸಿದವು. ಯುದ್ಧ ವಿಮಾನಗಳ ನಿರಂತರ ಹಾರಾಟದ ಸದ್ದು ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಯಾವೆಲ್ಲಾ ತಾಣಗಳನ್ನು ಗುರಿಯಾಗಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಯುದ್ಧ ಆರಂಭವಾದಾಗಿನಿಂದ 787 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸಂಸ್ಥೆ ತಿಳಿಸಿದೆ.
ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ತಜ್ಞರ ಸಮಿತಿಯ ಕಟ್ಟಡದ ಮೇಲೆ ದಾಳಿ ನಡೆದಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ. ಟೆಹರಾನ್‌ನ ಮೆಹರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ದಾಳಿಗೆ ಗುರಿಯಾಗಿದೆ.
13 ಯೋಧರು ಬಲಿ: ಟೆಹರಾನ್‌ನ 800 ಕಿ.ಮೀ ನಷ್ಟು ಆಗ್ನೇಯ ಭಾಗದ ಕೆರ್ಮನ್‌ನಲ್ಲಿರುವ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಇರಾನ್‌ನ 13 ಯೋಧರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆರ್ಮನ್ ಸೇನಾ ನೆಲೆಯಲ್ಲಿ ಇರಾನ್ ತನ್ನ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಇರಿಸಿದೆ.
ಇರಾನ್‌ನ ಪಶ್ಚಿಮ ಭಾಗದಲ್ಲಿರುವ ಹಮ್ದಾನ್ ನಗರದ ಮೇಲೆ ನಡೆದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಇಸ್ಫಹಾನ್ ಮತ್ತು ಶಿರಾಜ್ ನಗರಗಳ ಮೇಲೂ ದಾಳಿ ನಡೆದಿದೆ.
ಐಆರ್‌ಜಿಸಿ ಎಚ್ಚರಿಕೆ: ಇಸ್ರೇಲ್ ಹಾಗೂ ಅಮೆರಿಕದ ವಿರುದ್ಧದ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್‌ಜಿಸಿ) ಎಚ್ಚರಿಸಿದೆ. ‘ಅಮೆರಿಕ ಮತ್ತು ಇಸ್ರೇಲ್‌ಗೆ ನರಕದ ಬಾಗಿಲು ಕ್ಷಣ ಕ್ಷಣಕ್ಕೂ ತೆರೆದುಕೊಳ್ಳಲಿದೆ’ ಎಂದು ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಹೇಳಿದ್ದಾರೆ.
‘ಹೊರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ನಾವು ಸುಡುತ್ತೇವೆ’ ಎಂದು ಐಆರ್‌ಜಿಸಿ ಜನರಲ್ ಸರ್ದಾರ್ ಜಬ್ಬಾರಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.