ADVERTISEMENT

ಟ್ರಂಪ್, ನೆತನ್ಯಾಹು ಪಶ್ಚಾತ್ತಾಪ ಪಡುವಂತೆ ಮಾಡಿ: ಇರಾನ್‌ ಧರ್ಮಗುರು ಫತ್ವಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2025, 5:09 IST
Last Updated 30 ಜೂನ್ 2025, 5:09 IST
<div class="paragraphs"><p>ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್</p></div>

ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ಟೆಹರಾನ್: ಇರಾನ್‌ನ ಶಿಯಾ ಪಂಗಡದ ಹಿರಿಯ ಧರ್ಮಗುರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಅಥವಾ ಧಾರ್ಮಿಕ ಆದೇಶ ಹೊರಡಿಸಿದ್ದು, ಅವರನ್ನು ದೇವರ ಶತ್ರುಗಳು ಎಂದು ಕರೆದಿದ್ದಾರೆ ಎಂಬುದಾಗಿ ‘ಎನ್‌ಡಿಟಿವಿ‘ ವರದಿ ಮಾಡಿದೆ..

ADVERTISEMENT

ಇಸ್ಲಾಮಿಕ್ ಗಣರಾಜ್ಯದ(ಇರಾನ್) ನಾಯಕತ್ವಕ್ಕೆ ಬೆದರಿಕೆ ಹಾಕಿದ್ದಕ್ಕಾಗಿ ಅಮೆರಿಕ ಮತ್ತು ಇಸ್ರೇಲ್ ನಾಯಕರನ್ನು ನಾಶ ಮಾಡುವಂತೆ ಅಯತೊಲ್ಲಾ ನಾಸರ್ ಮಕರೆಮ್ ಶಿರಾಜಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ.

ಇಸ್ಲಾಮಿಕ್ ಗಣರಾಜ್ಯದ ನಾಯಕತ್ವಕ್ಕೆ ಬೆದರಿಕೆ ಹಾಕುವ ಯಾವುದೇ ವ್ಯಕ್ತಿ ಅಥವಾ ಆಡಳಿತವನ್ನು 'ಮೊಹರೆಬ್' ಎಂದು ಪರಿಗಣಿಸಲಾಗುತ್ತದೆ ಎಂದು ಮಕರೆಮ್ ಹೇಳಿರುವುದಾಗಿ ಮೆಹರ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಮೊಹರೆಬ್ ಎಂದರೆ ದೇವರ ವಿರುದ್ಧ ಯುದ್ಧ ಮಾಡುವ ವ್ಯಕ್ತಿ, ಇರಾನಿನ ಕಾನೂನಿನ ಅಡಿಯಲ್ಲಿ, ಮೊಹರೆಬ್ ಎಂದು ಗುರುತಿಸಲ್ಪಟ್ಟವರನ್ನು ಮರಣದಂಡನೆ, ಶಿಲುಬೆಗೇರಿಸುವಿಕೆ, ಅಂಗಾಂಗ ಕತ್ತರಿಸುವಿಕೆ ಅಥವಾ ಗಡಿಪಾರು ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಮುಸ್ಲಿಮರು ಅಥವಾ ಇಸ್ಲಾಮಿಕ್ ದೇಶಗಳು ಇಂತಹ ಶತ್ರುವಿಗೆ ನೀಡುವ ಯಾವುದೇ ಸಹಕಾರ ಅಥವಾ ಬೆಂಬಲ ಹರಾಮ್ ಅಥವಾ ನಿಷಿದ್ಧವಾಗಿದೆ. ಪ್ರಪಂಚದಾದ್ಯಂತದ ಎಲ್ಲ ಮುಸ್ಲಿಮರು. ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ವಿಷಾದಿಸುವಂತೆ ಮಾಡುವುದು ಅವಶ್ಯಕ ಎಂದು ಫತ್ವಾದಲ್ಲಿ ಸೇರಿಸಲಾಗಿದೆ.

ಈ ಸಂಬಂಧಿತ ತನ್ನ ಕರ್ತವ್ಯವನ್ನು ಪಾಲಿಸುವ ಮುಸ್ಲಿಂ ಇದರಲ್ಲಿ ಕಷ್ಟ ಅಥವಾ ನಷ್ಟವನ್ನು ಅನುಭವಿಸಿದರೆ, ದೇವರಿಂದ ಪ್ರತಿಫಲ ಪಡೆಯುತ್ತಾನೆ ಎಂದು ಅದು ಹೇಳಿದೆ.

ಜೂನ್ 13ರಂದು ಇಸ್ರೇಲ್ ಇರಾನ್‌ನಲ್ಲಿ ಬಾಂಬ್ ದಾಳಿ ನಡೆಸಿ ಪರಮಾಣು ಯೋಜನೆಗೆ ಸಂಬಂಧಿಸಿದ ಉನ್ನತ ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳನ್ನು ಕೊಂದು 12 ದಿನಗಳ ಯುದ್ಧದ ನಂತರ ಈ ಧಾರ್ಮಿಕ ತೀರ್ಪು ಬಂದಿದೆ.

ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿತ್ತು. ಬಳಿಕ, ಮಧ್ಯಪ್ರವೇಶಿಸಿದ್ದ ಅಮರಿಕ, ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಬಂಕರ್ ಬಸ್ಟರ್ ಕ್ಷಿಪಣಿಯನ್ನು ಉಡಾಯಿಸಿ ನಾಶಪಡಿಸಿತ್ತು.

ಬಳಿಕ, ಅಮೆರಿಕದ ಕತಾರ್ ವಾಯುನೆಲೆ ಮೇಲೆ ದಾಳಿ ಮಾಡಿದ್ದ ಇರಾನ್, ಕ್ರಮೇಣ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.