
ಇರಾನ್ ಪ್ರತಿಭಟನೆ
(ಎಕ್ಸ್ ಚಿತ್ರ)
ಟೆಹರಾನ್: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಗಡೀಪಾರುಗೊಂಡಿದ್ದ ಯುವರಾಜ ರೆಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಆಹ್ವಾನ ನೀಡಿದ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆ ಕಂಡುಬಂದಿದೆ. ಇದರ ಬೆನ್ನಲ್ಲೇ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮನೆಗಳಿಂದ ಬೀದಿಗಿಳಿದ ಜನ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ಇಸ್ಲಾಮಿಕ್ ರಾಷ್ಟ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಆರ್ಥಿಕತೆ ಕುಸಿತದ ಬೆನ್ನಲ್ಲೇ ಇರಾನ್ ದೇಶದಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೂ ಪ್ರತಿಭಟನೆಗಳು ವ್ಯಾಪಿಸಿವೆ. ಪ್ರತಿಭಟನಾಕಾರರಿಗೆ ಬೆಂಬಲ ಸೂಚಕವಾಗಿ ಅಂಗಡಿಗಳನ್ನ ಮುಚ್ಚಲಾಗಿತ್ತು.
ಈವರೆಗೆ ನಡೆದ ಪ್ರತಿಭಟನೆ, ಹಿಂಸಾಚಾರದಲ್ಲಿ ಕನಿಷ್ಠ 39 ಮಂದಿ ಮೃತಪಟ್ಟಿದ್ದಾರೆ. 2,260ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ.
ಇರಾನ್‌ನಲ್ಲಿ ಆರ್ಥಿಕತೆ ಕುಸಿತ, ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಪ್ರತಿಭಟನೆ ಕಾವೇರುತ್ತಿದ್ದಂತೆಯೇ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.