ಇರಾನ್‌ನ ಫೋರ್ಡೊ ಪರಮಾಣು ಘಟಕದ ಉಪಗ್ರಹ ಚಿತ್ರ
(ರಾಯಿಟರ್ಸ್ ಚಿತ್ರ)
ಟೆಹರಾನ್/ಜೆರುಸಲೇಂ/ವಿಯೆನ್ನಾ: ಇರಾನ್‌ನ ಫೋರ್ಡೊ ಪರಮಾಣು ಘಟಕದ ಮೇಲೆ ಇಸ್ರೇಲ್ ಸೋಮವಾರ ದಾಳಿ ನಡೆಸಿದೆ. ಫೋರ್ಡೊ ಸೇರಿದಂತೆ ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕವು ಭಾನುವಾರ ಭಾರಿ ತೂಕದ ಬಾಂಬ್‌ಗಳನ್ನು ಬೀಳಿಸಿತ್ತು.
ಮೂರೂ ಪರಮಾಣು ಘಟಕಗಳಲ್ಲಿ ಫೋರ್ಡೊ ಘಟಕವು ಭಾರಿ ಸುರಕ್ಷಿತ ಎನ್ನಲಾಗಿತ್ತು. ವಾಯು ದಾಳಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಪರ್ವತವನ್ನು ಕೊರೆದು ಸುಮಾರು 80ರಿಂದ 90 ಮೀಟರ್ ಆಳದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ.
‘ಶೇ 60ರಷ್ಟು ಶುದ್ಧತೆಯ ಯುರೇನಿಯಂ ಖನಿಜ ಇರುವ ಈ ಘಟಕವನ್ನು ತಲುಪುವ ದಾರಿಯನ್ನು ಧ್ವಂಸ ಮಾಡಿದ್ದೇವೆ’ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ‘ನಮ್ಮ ದಾಳಿಯಿಂದ ಘಟಕಗಳು ಸಂಪೂರ್ಣವಾಗಿ ನಾಶವಾಗಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಅಮೆರಿಕವು ಪರಮಾಣು ಘಟಕಗಳ ಮೇಲೆ ದಾಳಿ ಮಾಡುವ ಮುನ್ನವೇ ಸುಮಾರು 400 ಕೆ.ಜಿ ಯುರೇನಿಯಂ ದಾಸ್ತಾನನ್ನು ಇರಾನ್ ಬೇರೆಡೆಗೆ ಸ್ಥಳಾಂತರಿಸಿತ್ತು ಎನ್ನುವ ಮಾತೂ ಕೇಳಿಬರುತ್ತಿದೆ.
ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದ ಎಷ್ಟರ ಮಟ್ಟಿಗೆ ಹಾನಿಗಳಾಗಿವೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ಆದರೆ, ಕೆಲವು ಸುದ್ದಿ ಸಂಸ್ಥೆಗಳು ಉಪಗ್ರಹಗಳ ಚಿತ್ರಗಳನ್ನು ಅವಲೋಕಿಸಿ ಹಾನಿಯ ಅಂದಾಜು ಮಾಡಲು ಯತ್ನಿಸಿವೆ.
‘ಘಟಕದ ಭೇಟಿಗೆ ಅವಕಾಶ ನೀಡಿ’
‘ನಿಮ್ಮ ಪರಮಾಣು ಘಟಕಗಳ ಭೇಟಿಗೆ ಅವಕಾಶ ನೀಡಿ’ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ನಿರ್ದೇಶಕ ರಾಫೆಲ್ ಗ್ರೋಸಿ ಅವರು ಇರಾನ್ ಅನ್ನು ಆಗ್ರಹಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ಮಂಡಳಿಯ ತುರ್ತು ಸಭೆಯು ವಿಯೆನ್ನಾದಲ್ಲಿ ಸೋಮವಾರ ನಡೆಯಿತು.
‘ಫೋರ್ಡೊ ಘಟಕದ ಬಳಿ ದೊಡ್ಡ ದೊಡ್ಡ ಕುಳಿಗಳು ಬಿದ್ದಿವೆ. ಭೂಮಿ ಆಳಕ್ಕೆ ಹೋಗಿ ಸ್ಫೋಟಗೊಳ್ಳುವ ಭಾರಿ ಗಾತ್ರದ ಬಾಂಬ್‌ಗಳಿಂದಲೇ ಈ ಕುಳಿಗಳು ಬಿದ್ದಿವೆ ಎನ್ನುವುದು ಖಚಿತ. ಅಮೆರಿಕದ ದಾಳಿಯಿಂದ ಘಟಕಕ್ಕೆ ದೊಡ್ಡ ಮಟ್ಟದ ಹಾನಿಯಂತೂ ಆಗಿದೆ. ಏನೇ ಆದರೂ, ಆ ಸ್ಥಳಕ್ಕೆ ಭೇಟಿ ನೀಡದ ಹೊರತು ಹಾನಿಯ ಅಂದಾಜು ಅಸಾಧ್ಯ’ ಎಂದರು.
‘ತನ್ನ ಬಳಿ ಇರುವ ಪರಮಾಣು ಉಪಕರಣಗಳು ಮತ್ತು ವಸ್ತುಗಳನ್ನು ರಕ್ಷಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇರಾನ್ ನಮಗೆ ಜೂನ್ 13ರಂದೇ ಪತ್ರ ಬರೆದಿತ್ತು. ಸಂಸ್ಥೆಯ ಮಾರ್ಗಸೂಚಿಯಂತೆಯೇ ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಿ ಎಂದು ಅದೇ ದಿನ ಉತ್ತರಿಸಿದ್ದೆವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.