ADVERTISEMENT

ಅಮೆರಿಕ– ಇರಾನ್‌ ಸಂಘರ್ಷ ತೀವ್ರ

ದಾಳಿ ನಡೆಸಿದರೆ ಪರಿಣಾಮ ಎದುರಿಸಬೇಕಾದೀತು: ಇರಾನ್‌ ಎಚ್ಚರಿಕೆ

ಏಜೆನ್ಸೀಸ್
Published 22 ಜೂನ್ 2019, 20:00 IST
Last Updated 22 ಜೂನ್ 2019, 20:00 IST
ಇರಾನ್‌ ಹೊಡೆದುರುಳಿಸಿದ ಅಮೆರಿಕದ ಡ್ರೋನ್‌ ಅವಶೇಷ
ಇರಾನ್‌ ಹೊಡೆದುರುಳಿಸಿದ ಅಮೆರಿಕದ ಡ್ರೋನ್‌ ಅವಶೇಷ   

ವಾಷಿಂಗ್ಟನ್‌: ಅಮೆರಿಕದ ಬೇಹುಗಾರಿಕಾ (ಸ್ಪೈ)ಡ್ರೋನ್ ಅನ್ನು ಇರಾನ್‌ ಹೊಡೆದುರುಳಿಸಿದ ಬಳಿಕ ಎರಡು ರಾಷ್ಟ್ರಗಳ ನಡುವೆ ಸಂಘರ್ಷ ತಾರಕಕ್ಕೇರಿದೆ.

ಡ್ರೋನ್‌ ಹೊಡೆದುರುಳಿಸಿದಕ್ಕಾಗಿ ಇರಾನ್‌ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದೆವು, ಆದರೆ ಕೊನೇ ಕ್ಷಣದಲ್ಲಿ ದಾಳಿಯನ್ನು ರದ್ದುಗೊಳಿಸಿದೆವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್‌ ತಿರುಗೇಟು ನೀಡಿದೆ. ‘ಇರಾನ್‌ ಮೇಲೆ ಒಂದು ಗುಂಡಿನ ದಾಳಿ ನಡೆದರೂ ಅಮೆರಿಕದ ಹಿತಾಸಕ್ತಿ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಧಕ್ಕೆಯಾಗಬಹುದು‘ ಎಂದು ಸೇನೆಯ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಅಬೋಲ್‌ ಫಜಲ್‌ ಶೇಖಾರ್ಚಿ ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಮೂಲಕ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ ಸಂದೇಶ ರವಾನಿಸಿದೆ.

ದಾಳಿಗೆ 10 ನಿಮಿಷವಿದ್ದಾಗ ರದ್ದು: ‘ಗುರುವಾರ ರಾತ್ರಿಯೇ 3 ಕಡೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದೆವು. ದಾಳಿಯಲ್ಲಿ ಎಷ್ಟು ಜನ ಸಾಯಬಹುದು ಎಂದು ನಾನು ಪ್ರಶ್ನಿಸಿದ್ದೆ. ಈ ಸಂದರ್ಭದಲ್ಲಿ 150 ಜನ ಸಾಯಬಹುದು ಎಂದು ಜನರಲ್‌ ಒಬ್ಬರು ತಿಳಿಸಿದರು. ಒಂದು ಮಾನವರಹಿತ ಡ್ರೋನ್‌ ಹೊಡೆದುರುಳಿಸಿದಕ್ಕಾಗಿ ಈ ಕ್ರಮ ಸರಿಯಲ್ಲ ಎಂದು ಚಿಂತಿಸಿ, ದಾಳಿಗೆ ಕೇವಲ 10 ನಿಮಿಷವಿದ್ದಾಗ ನಿರ್ಧಾರ ಬದಲಾಯಿಸಿದೆ’ ಎಂದು ಟ್ರಂಪ್‌ ತಿಳಿಸಿದ್ದಾರೆ.

ADVERTISEMENT

ಅಮೆರಿಕ ಸೇನೆಯ ಅತಿ ಹೆಚ್ಚು ವೆಚ್ಚದ ಶಸ್ತ್ರವಾಗಿದ್ದ ಗ್ಲೋಬಲ್‌ ಹಾಕ್‌ ಐ ಡ್ರೋನ್‌ ಇರಾನ್‌ನಿಂದ 34 ಕಿ.ಮೀ. ದೂರದಲ್ಲಿತ್ತು. ಈ ಸಂದರ್ಭದಲ್ಲಿ ಕ್ಷಿಪಣಿ ಮೂಲಕ ಇದನ್ನು ಹೊಡೆದುರುಳಿಸಲಾಗಿದೆ ಎಂದು ಪೆಂಟಗನ್‌ ತಿಳಿಸಿದೆ. ಇರಾನ್‌ ವಾಯುಪ್ರದೇಶದಲ್ಲಿ ಡ್ರೋನ್‌ ಇರಲಿಲ್ಲ ಎನ್ನುವುದಕ್ಕೆ, ಇದರ ಪಥದ ನಕ್ಷೆಯನ್ನು ಪೆಂಟಗನ್‌ ಬಿಡುಗಡೆಗೊಳಿಸಿದೆ. ಇತ್ತ ಡ್ರೋನ್‌ ಇರಾನ್ ವಾಯು ಪ್ರದೇಶದಲ್ಲಿತ್ತು ಎನ್ನುವುದಕ್ಕೆ ಟೆಹರಾನ್‌ ನಕ್ಷೆ ಮೂಲಕ ಸಾಕ್ಷ್ಯ ನೀಡಿದ್ದು, ಸ್ವದೇಶಿ ನಿರ್ಮಿತ ಖೋರ್‌ದಾದ್ 3 ಕ್ಷಿಪಣಿಯಿಂದ ಇದನ್ನು ಹೊಡೆದುರುಳಿಸಲಾಯಿತು ಎಂದು ತಿಳಿಸಿದೆ.

ಯುದ್ಧ ಭೀತಿ: ಡ್ರೋನ್‌ ಹೊಡೆದುರುಳಿಸಿದ ಘಟನೆ ಬಳಿಕಟ್ರೆಹ್ರಾನ್‌ನಲ್ಲಿ ಯುದ್ಧ ಭೀತಿ ಆವರಿಸಿಕೊಂಡಿದೆ. ‘ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿಲ್ಲ. ಇಂತಹ ಸಂದರ್ಭದಲ್ಲಿ ಯುದ್ಧ ಆಗಬಹುದು ಎನ್ನುವ ಮಾತುಗಳೇ ನನಗೆ ಆತಂಕ ತಂದೊಡ್ಡಿದೆ’ ಎಂದು ಅಂಗಡಿಯೊಂದರ ಮಾಲೀಕ ಅಮೀರ್‌ ತಿಳಿಸಿದ್ದಾರೆ.

ನೂತನ ರಕ್ಷಣಾ ಕಾರ್ಯದರ್ಶಿ
ಶುಕ್ರವಾರ ತಡರಾತ್ರಿ ರಕ್ಷಣಾ ವಿಭಾಗದ ಕಾರ್ಯದರ್ಶಿಯಾಗಿ ಮಾರ್ಕ್‌ ಎಸ್ಪರ್‌ರನ್ನು ಟ್ರಂಪ್‌ ನೇಮಿಸಿದ್ದಾರೆ.ಈ ಹುದ್ದೆ ಅಮೆರಿಕದ ಆಡಳಿತದಲ್ಲೇ ಅತ್ಯುನ್ನತ ಹುದ್ದೆಯಾಗಿದ್ದು, ಅಧ್ಯಕ್ಷರಿಗೆ ಮುಖ್ಯ ಸಲಹೆಗಾರರಾಗಿಯೂ ಇವರು ಕಾರ್ಯನಿರ್ವಹಿಸಿಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಜೇಮ್ಸ್‌ ಮ್ಯಾಟಿಸ್‌ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಭರ್ತಿ ಮಾಡಿರಲಿಲ್ಲ.

‘ಇರಾನ್‌ ವಾಯುಪ್ರದೇಶ ಬಳಕೆ ಇಲ್ಲ’
ನವದೆಹಲಿ (ಪಿಟಿಐ): ಅಮೆರಿಕ ಮತ್ತು ಇರಾನ್‌ ನಡುವೆ ಸಂಘರ್ಷ ದಿನೇದಿನೆ ಹೆಚ್ಚುತ್ತಿರುವ ಕಾರಣ ಇರಾನ್‌ ವಾಯುಪ‍್ರದೇಶವನ್ನು ಬಳಸದಿರಲು ಇಂಡಿಯನ್‌ ಏರ್‌ಲೈನ್ಸ್‌ ನಿರ್ಧರಿಸಿದೆ.

‘ಇಂಡಿಯನ್‌ ಏರ್‌ಲೈನ್ಸ್‌ ವಿಮಾನಗಳು ಬೇರೆ ಮಾರ್ಗಗಳ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

‘ಸೇನಾ ಚಟುವಟಿಕೆಗಳು ಹೆಚ್ಚುತ್ತಿದ್ದು, ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಇರಾನ್‌ ವಾಯುಪ್ರದೇಶ ವ್ಯಾಪ್ತಿಗೆ ಒಳಪಡುವ ಸಾಗರದ ಮೇಲೆ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ’ ಎಂದು ಅಮೆರಿಕದ ವಿಮಾನಯಾನ ನಿಯಂತ್ರಣಾಧಿಕಾರಿ ಹೇಳಿಕೆ ನೀಡಿದ ಬೆನ್ನಲ್ಲೇಭಾರತ ಈ ನಿರ್ಧಾರಕೈಗೊಂಡಿದೆ.

*

ಸಂಘರ್ಷ ಹೆಚ್ಚಾಗುತ್ತಿರುವಾಗ ಪರಸ್ಪರ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶವನ್ನು ಟೆಹ್ರಾನ್‌ ನಿರಾಕರಿಸಿದೆ.
-ಬ್ರಯಾನ್‌ ಹುಕ್‌, ಇರಾನ್‌ನಲ್ಲಿನ ಅಮೆರಿಕದ ವಿಶೇಷ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.